ಪುಣೆ ಬಸ್ಸಿನಲ್ಲಿ ಅತ್ಯಾಚಾರ: ಆರೋಪಿ ದತ್ತಾತ್ರೇಯ ಗಾಡೆ ಬಂಧನ

ಪುಣೆ: ಸ್ವರಗೇಟ್ ಬಸ್‍ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿನಲ್ಲಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ದತ್ತಾತ್ರೇಯ ಗಾಡೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆಯ ಶಿರೂರು ತಹಸೀಲ್ ಭಾಗದಲ್ಲಿ ಮಧ್ಯರಾತ್ರಿ ಬಳಿಕ ಅಂದರೆ ಶುಕ್ರವಾರ ನಸುಕಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಗಾಡೆ ವಿರುದ್ಧ ಪುಣೆ ಹಾಗೂ ಅಹಲ್ಯಾನಗರ ಜಿಲ್ಲೆಯಲ್ಲಿ ಕಳ್ಳತನ, ಡಕಾಯಿತಿ ಮತ್ತು ಸರಗಳ್ಳತನದ ಐದಾರು ಪ್ರಕರಣಗಳು ಇವೆ. 2019ರಿಂದೀಚೆಗೆ ಈತ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದ.
ಗಾಡೆ ಬಂಧನಕ್ಕಾಗಿ ಪುಣೆ ಪೊಲೀಸರು ಡ್ರೋಣ್ ಹಾಗೂ ಶ್ವಾನದಳವನ್ನು ಶಿರೂರ್ ರಹಸೀಲ್‍ನಲ್ಲಿ ನಿಯೋಜಿಸಿದ್ದರು. ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮದ ಶಿವಶಾಹಿ ಬಸ್‍ನಲ್ಲಿ ಎರಡು ದಿನಗಳ ಹಿಂದೆ ಈತ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಆಪಾದಿಸಲಾಗಿದೆ.
ಪುಣೆಯ ಗುಣಾತ್ ಗ್ರಾಮದ ನಿವಾಸಿಯಾದ ಈತನ ಪತ್ತೆಗೆ 13 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಕಬ್ಬಿನ ಗದ್ದೆ ಸೇರಿದಂತೆ ಗುಣಾತ್ ಗ್ರಾಮದಲ್ಲಿ ಪೊಲೀಸರು ಶೋಧಕಾರ್ಯಾಚರಣೆಗೆ ಡ್ರೋಣ್ ಹಾಗೂ ಶ್ವಾನದಳವನ್ನು ಬಳಸಿದ್ದರು. ಗ್ರಾಮಕ್ಕೆ 100ಕ್ಕೂ ಹೆಚ್ಚು ಪೊಲೀಸರು ಲಗ್ಗೆ ಇಟ್ಟಿದ್ದರು.
ಪುಣೆಯ ಸ್ವರಗೇಟ್ ಎಂಎಸ್‍ಆರ್‍ಟಿಸಿಯ ಅತಿದೊಡ್ಡ ಬಸ್ ಡಿಪೊಗಳಲ್ಲೊಂದಾಗಿದೆ. ಸತಾರಾ ಜಿಲ್ಲೆಯ ಫಾಲ್ತಾನ್‍ಗೆ ಹೋಗುವ ಬಸ್ಸಿಗೆ ಕಾಯುತ್ತಿದ್ದಾಗ ಮಂಗಳವಾರ ನಸುನಿಕ 5.45ರ ವೇಳೆಗೆ ಈ ಘಟನೆ ನಡೆದಿತ್ತು. ಮಹಿಳೆಯನ್ನು ದೀದಿ ಎಂದು ಸಂಭೋಧಿಸಿ ಮಾತುಕತೆಗೆ ಇಳಿದ ಗಾಡೆ, ಇನ್ನೊಂದು ಪ್ಲಾಟ್‍ಫಾರಂನಲ್ಲಿ ಸತಾರ ಬಸ್ ಸಿಗುತ್ತದೆ ಎಂದು ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.