ಉತ್ತರ ಪ್ರದೇಶ | ಬೇಹುಗಾರಿಕೆ ಆರೋಪಕ್ಕೆ ಗುರಿಯಾಗಿ ಖುಲಾಸೆಗೊಂಡಿದ್ದ ವ್ಯಕ್ತಿ ನ್ಯಾಯಾಧೀಶರಾಗಿ ನೇಮಕ
ಸಾಂದರ್ಭಿಕ ಚಿತ್ರ
ಕಾನ್ಪುರ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಹಾಗೂ ದೇಶದ್ರೋಹ ಆರೋಪಕ್ಕೆ ಗುರಿಯಾಗಿ, ವಿಚಾರಣೆ ಎದುರಿಸಿದ್ದ ಕಾರಣಕ್ಕೆ ನ್ಯಾಯಾಧೀಶ ಹುದ್ದೆ ನೇಮಕಾತಿಯಿಂದ ನಿರಾಕರಣೆಗೊಳಗಾಗಿದ್ದ ವ್ಯಕ್ತಿಯನ್ನು ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.
ಜನವರಿ 15, 2025ರೊಳಗೆ ಅರ್ಜಿದಾರ ಪ್ರದೀಪ್ ಕುಮಾರ್ ಅವರಿಗೆ ನೇಮಕಾತಿ ಪತ್ರ ವಿತರಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಅರ್ಜಿದಾರ ಪ್ರದೀಪ್ ಕುಮಾರ್ 2017ರಲ್ಲಿ ನಡೆದಿದ್ದ ಉನ್ನತ ನ್ಯಾಯಾಂಗ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದರು ಎನ್ನಲಾಗಿದೆ.
ಅರ್ಜಿದಾರ ಪ್ರದೀಪ್ ಕುಮಾರ್ ಅವರ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೌಮಿತ್ರ ದಯಾಳ್ ಸಿಂಗ್ ಹಾಗೂ ನ್ಯಾ. ದೊನಾಡಿ ರಮೇಶ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು, "ಅರ್ಜಿದಾರರು ತಾವು ಎದುರಿಸಿದ ಕ್ರಿಮಿನಲ್ ವಿಚಾರಣೆಯಲ್ಲಿ ಗೌರವಯುತವಾಗಿ ಖುಲಾಸೆಗೊಂಡಿದ್ದಾರೆ ಹಾಗೂ ಅವರ ವಿರುದ್ಧ ಎರಡೂ ಪ್ರಕರಣಗಳಲ್ಲಿ ಯಾವುದೇ ಸತ್ಯಾಂಶ ಪತ್ತೆಯಾಗಿಲ್ಲ" ಎಂದು ಅಭಿಪ್ರಾಯ ಪಟ್ಟಿತು.
ಉತ್ತರ ಪ್ರದೇಶ ಉನ್ನತ ನ್ಯಾಯಾಂಗ ಸೇವೆ (ನೇರ ನೇಮಕಾತಿ) ಪರೀಕ್ಷೆ, 2016ರ ಅಡಿ ಪ್ರದೀಪ್ ಕುಮಾರ್ ಉತ್ತರ ಪ್ರದೇಶ ಉನ್ನತ ನ್ಯಾಯಾಂಗ ಸೇವೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ತಮ್ಮ ವಿರುದ್ಧ 2014ರಲ್ಲಿ ಬೇಹುಗಾರಿಕೆ ಹಾಗೂ ದೇಶ ದ್ರೋಹ ಆರೋಪಗಳಡಿ ವಿಚಾರಣೆ ನಡೆದಿತ್ತು ಎಂಬ ಸಂಗತಿಯನ್ನು ಅವರು ಬಹಿರಂಗ ಪಡಿಸಿದ್ದರು.