ಅಮೇಥಿ: ದಲಿತ ಕುಟುಂಬದ ನಾಲ್ವರ ಗುಂಡಿಕ್ಕಿ ಹತ್ಯೆಗೈದ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು
ಹತ್ಯೆಗೆ ಕಾರಣವೇನು?
Photo: NDTV
ಅಮೇಥಿ: ದಲಿತ ಕುಟುಂಬದ ಹತ್ಯೆಗೆ ಬಳಸಿದ ಪಿಸ್ತೂಲ್ ವಶಪಡಿಸಿಕೊಳ್ಳಲು ಕರೆದೊಯ್ದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿದಾಗ ಕಾಲಿಗೆ ಗುಂಡು ತಗುಲಿದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಇಡೀ ದಲಿತ ಕುಟುಂಬವನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಚಂದನ್ ವರ್ಮಾ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ದಿಲ್ಲಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಚಂದನ್ ವರ್ಮಾನನ್ನು ನೋಯ್ಡಾದ ಟೋಲ್ ಪ್ಲಾಝಾ ಬಳಿ ಬಂಧಿಸಲಾಗಿತ್ತು. ಅಮೇಥಿಯ ಅಹೋರ್ವಾ ಭವಾನಿ ಪ್ರದೇಶದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಸುನಿಲ್ ಕುಮಾರ್ (35), ಅವರ 32 ವರ್ಷದ ಪತ್ನಿ ಪೂನಂ ಮತ್ತು ದಂಪತಿಯ ಆರು ಮತ್ತು ಒಂದು ವರ್ಷದ ಇಬ್ಬರು ಪುತ್ರಿಯರಾದ ದೃಷ್ಟಿ ಮತ್ತು ಸುನಿ ಅವರನ್ನು ಚಂದನ್ ವರ್ಮಾ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಶಿವತಂಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮದನ್ ಕುಮಾರ್ ಸಿಂಗ್ ಕಾಲುವೆಯ ಟ್ರ್ಯಾಕ್ ಎಸೆದಿದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಮದನ್ ಕುಮಾರ್ ಸಿಂಗ್ ಪಿಸ್ತೂಲ್ ಮತ್ತು ಅದರ ಮ್ಯಾಗಝೀನ್ ಅನ್ನು ಪರಿಶೀಲಿಸುತ್ತಿದ್ದಾಗ, ಆರೋಪಿ ಚಂದನ್ ವರ್ಮಾ, ಮದನ್ ಅವರ ಹೋಲ್ಸ್ಟರ್ ನಲ್ಲಿದ್ದ ಬಂದೂಕನ್ನು ಕಸಿದುಕೊಂಡು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಕ್ಷಣೆಗಾಗಿ, ಇನ್ಸ್ಪೆಕ್ಟರ್ ಸಚ್ಚಿದಾನಂದ ರಾಯ್ ಅವರು ಗುಂಡು ಹಾರಿಸಿದರು. ಅದು ಆರೋಪಿ ಚಂದನ್ ವರ್ಮಾನ ಬಲಗಾಲಿಗೆ ತಗುಲಿತು ಎಂದು ತಿಳಿದು ಬಂದಿದೆ.
ಆರೋಪಿಗೆ ಹತ್ಯೆಯಾದ ಮಹಿಳೆ ಪೂನಂ ಅವರೊಂದಿಗೆ ಸುಮಾರು ಒಂದೂವರೆ ವರ್ಷಗಳಿಂದ ಸಂಬಂಧವಿತ್ತು. ಇತ್ತೀಚಿಗೆ ಸಂಬಂಧ ಹಳಸಿದ್ದರಿಂದ ಕೊಲೆ ಮಾಡಿದ್ದೇನೆ ಎಂದು ಆರೋಪಿ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ಹತ್ಯೆಯಾದ ಪೂನಂ ಅವರು ಎರಡು ತಿಂಗಳ ಹಿಂದೆ ಆರೋಪಿ ಚಂದನ್ ವರ್ಮಾ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಅಪರಾಧಕ್ಕೆ ಬಳಸಲಾದ ಒಂದು ದೇಶ ನಿರ್ಮಿತ ಪಿಸ್ತೂಲ್ ಮತ್ತು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾಲಿಗೆ ಗುಂಡು ತಗಲಿದ ಆರೋಪಿ ಚಂದನ್ ವರ್ಮಾನನ್ನು ಚಿಕಿತ್ಸೆಗಾಗಿ ತಿಲೋಯಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.