ಮಿಝೋರಾಂ | ಪೆಟ್ರೋಲ್ ಪಂಪ್ ನ ಕ್ಯೂಆರ್ ಕೋಡ್ ಅನ್ನೇ ಬದಲಿಸಿ ಹಣ ಲಪಟಾಯಿಸುತ್ತಿದ್ದ ಖದೀಮನ ಬಂಧನ!
ಸಾಂದರ್ಭಿಕ ಚಿತ್ರ | PC : META AI
ಐಜ್ವಾಲ್ : ಪೆಟ್ರೋಲ್ ಪಂಪ್ ಒಂದರ ಬಳಿ ಇರಿಸಲಾಗಿದ್ದ ಕ್ಯೂಆರ್ ಕೋಡ್ ಸ್ಟಿಕ್ಕರ್ ಅನ್ನೇ ಬದಲಾಯಿಸಿ ಹಣ ಲಪಟಾಯಿಸುತ್ತಿದ್ದ ಮಿಝೋರಾಂನ 23 ವರ್ಷದ ಯುವಕನೊಬ್ಬನನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಲುಂಗ್ಲೈನ ಹ್ರಾಂಗ್ ಚಾಕೌನ್ ನಿವಾಸಿ ಲಾಲ್ ರೋಹುಲ್ವಾ ಎಂದು ಗುರುತಿಸಲಾಗಿದ್ದು, ಸದ್ಯ ಆತ ಐಜ್ವಾಲ್ ನ ಸಶಸ್ತ್ರ ವೆಂಗ್ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಪೆಟ್ರೋಲ್ ಪಂಪ್ ಬಳಿ ಇರಿಸಲಾಗಿದ್ದ ಕ್ಯೂಆರ್ ಕೋಡ್ ಸ್ಟಿಕರ್ ಅನ್ನು ದುಷ್ಕರ್ಮಿಯೊಬ್ಬ ಬದಲಿಸಿದ್ದಾನೆ ಎಂದು ಶನಿವಾರದಂದು ಐಜ್ವಾಲ್ ನ ಟ್ರೆಷರಿ ಸ್ಕ್ವೇರ್ ಬಳಿ ಇರುವ ಮಿಝೋಫೀಲ್ಡ್ ಪೆಟ್ರೋಲ್ ಪಂಪ್ ನ ವ್ಯವಸ್ಥಾಪಕರಿಂದ ದೂರು ಸ್ವೀಕರಿಸಲಾಯಿತು ಎಂದು ಮಿಝೋರಾಂ ಪೊಲೀಸ್ ಮಹಾ ನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ) ಲಾಲ್ಬಿಯಕ್ ಥಾಂಗ್ ಖಿಯಾಂಗ್ಟೆ ಹೇಳಿದ್ದಾರೆ.
ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ರವಿವಾರ ಲಾಲ್ ರೋಹುಲ್ವಾನನ್ನು ಸಂಶಯದ ಮೇಲೆ ಬಂಧಿಸಿದರು ಎಂದು ತಿಳಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ. ಆರೋಪಿಗೆ ಯಾವುದೇ ಅಪರಾಧಿ ಹಿನ್ನೆಲೆಯಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಉದ್ಯಮವಾದ ಮಿಝೋಫೀಲ್ಡ್ ತನ್ನ ಪೆಟ್ರೋಲ್ ಪಂಪ್ ಬಳಿ ಇರಿಸಿದ್ದ ಮೂಲ ಕ್ಯೂಆರ್ ಕೋಡ್ ಸ್ಟಿಕರ್ ಬದಲಿಗೆ ಆರೋಪಿಯು ತನ್ನದೇ ಜಿಪೇ ಕ್ಯೂಆರ್ ಕೋಡ್ ಸ್ಟಿಕರ್ ಅನ್ನು ಮುದ್ರಿಸಿ ಅಲ್ಲಿ ಇರಿಸಿದ್ದ ಎಂದು ಅವರು ತಿಳಿಸಿದ್ದಾರೆ.
ಜಿಪೇ ಮೂಲಕ 2,315 ರೂ.ಅನ್ನು ಸ್ವೀಕರಿಸಿದ್ದ ಆರೋಪಿಯು, ನಂತರ ಓರ್ವ ಪಾವತಿದಾರರಿಗೆ ರೂ. 890 ಅನ್ನು ಮರುಪಾವತಿಸಿದ್ದ. ಉಳಿದ ಮೊತ್ತವನ್ನು ತನ್ನ ಖರ್ಚಿಗೆ ಬಳಸಿಕೊಂಡಿದ್ದ ಎಂದು ಅವರು ಹೇಳಿದ್ದಾರೆ.