'ಜೈ ಶ್ರೀರಾಮ್' ಘೋಷಣೆ ಹೇಳಲು ಒತ್ತಾಯಿಸಿ ವ್ಯಕ್ತಿಯ ಮೇಲೆ ಹಲ್ಲೆ: ವಿಡಿಯೊ ವೈರಲ್ ಆದ ಬಳಿಕ ಇಬ್ಬರ ಬಂಧನ
ಬುಲಂದ್‌ಶಹರ್: ಮೊಬೈಲ್ ಕಳವು ಮಾಡಿದ್ದಾನೆ ಎಂಬ ಸಂಶಯ ವ್ಯಕ್ತಪಡಿಸಿ, ಮೂವರು ದುಷ್ಕರ್ಮಿಗಳು ಮುಸ್ಲಿಂ ವ್ಯಕ್ತಿಯೋರ್ವನನ್ನು ಥಳಿಸಿ, ಕಿರುಕುಳ ನೀಡಿ, 'ಜೈ ಶ್ರೀ ರಾಮ್'' ಘೋಷಣೆ ಕೂಗುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ವರದಿಯಾಗಿದೆ.
ಬುಲಂದ್‌ಶಹರ್: ಮೊಬೈಲ್ ಕಳವು ಮಾಡಿದ್ದಾನೆ ಎಂಬ ಸಂಶಯ ವ್ಯಕ್ತಪಡಿಸಿ, ಮೂವರು ದುಷ್ಕರ್ಮಿಗಳು ಮುಸ್ಲಿಂ ವ್ಯಕ್ತಿಯೋರ್ವನನ್ನು ಥಳಿಸಿ, ಕಿರುಕುಳ ನೀಡಿ, 'ಜೈ ಶ್ರೀ ರಾಮ್'' ಘೋಷಣೆ ಕೂಗುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ವರದಿಯಾಗಿದೆ. ಈ ಘಟನೆಯನ್ನು ಆರೋಪಿಗಳು ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣ ಮಾಡಿಕೊಂಡಿದ್ದು, ನಂತರ ಇದರ ನೆರವಿನಿಂದಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಘಟನೆಯು ಜೂನ್ 13ರಂದು ನಡೆದಿದ್ದು, ಸಂತ್ರಸ್ತನ ಕುಟುಂಬದ ಸದಸ್ಯರು ಬುಲಂದ್‌ಶಹರ್ ನಗರದ ಸಹಾಯಕ ಪೊಲೀಸ್ ಅಧೀಕ್ಷಕರ ಮೊರೆ ಹೋದ ನಂತರ ಶನಿವಾರ ಆರೋಪಿಗಳನ್ನು ಬಂಧಿಸಲಾಗಿದೆ.
ಕಾಕೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಸಂತ್ರಸ್ತ ಸಾಹಿಯು ಜೂನ್ 13ರಂದು ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಮೂವರು ಯುವಕರು ಆತನ ಬಳಿ ಬಂದು, ಬಲವಂತವಾಗಿ ಆತನನ್ನು ತಮ್ಮ ಬೈಕ್‌ಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು ಎಂದು ಆರೋಪಿಸಲಾಗಿದೆ.
ನಂತರ ಅವರು, ಮೊಬೈಲ್ ಕಳವಿನ ಕುರಿತು ಸಾಹಿಯನ್ನು ಪ್ರಶ್ನಿಸಿದ್ದು, ಅದಕ್ಕಾತ ನನಗೇನೂ ತಿಳಿದಿಲ್ಲ ಎಂದು ಉತ್ತರಿಸಿದ್ದಾನೆ. ನಂತರ ಆರೋಪಿಗಳು ಆತನನ್ನು ಮರವೊಂದಕ್ಕೆ ಕಟ್ಟಿ ಹಾಕಿ, ಆತನನ್ನು ಥಳಿಸಿ, ಆತನ ತಲೆಯನ್ನು ಬೋಳಿಸಿ, 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಅದರೊಂದಿಗೆ ಸಾಹಿಯ ವಿಡಿಯೊವನ್ನೂ ಚಿತ್ರೀಕರಿಸಿಕೊಂಡಿರುವ ಆರೋಪಿಗಳು, ಆ ವಿಡಿಯೊವನ್ನು ಅದರ ಬೆನ್ನಿಗೇ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ಘಟನಾ ಸ್ಥಳದಿಂದ ಪಾರಾಗುವಲ್ಲಿ ಯಶಸ್ವಿಯಾಗಿರುವ ಸಾಹಿ, ನಂತರ ಪೊಲೀಸರ ಬಳಿಗೆ ತೆರಳಿದ್ದಾನೆ. ಆದರೆ, ಈ ಕುರಿತು ಕ್ರಮ ಕೈಗೊಳ್ಳಲು ನಿರಾಕರಿಸಿದ ಪೊಲೀಸರು ನನ್ನ ವಿರುದ್ಧವೇ ಕಳವು ಪ್ರಕರಣ ದಾಖಲಿಸಿಕೊಂಡು ಬಂಧಿಸಿದರು ಎಂದು ಆತ ಆರೋಪಿಸಿದ್ದಾನೆ.
ಪೊಲೀಸರು ಕೇವಲ ನಮ್ಮನ್ನು ಬೆದರಿಸಲಿಲ್ಲ. ಬದಲಿಗೆ ದೂರನ್ನು ಹಿಂಪಡೆಯುವಂತೆ ಒತ್ತಡವನ್ನೂ ಹೇರಿದರು ಎಂದು ಸಾಹಿ ಹಾಗೂ ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಈ ಸಂಬಂಧ ದೂರು ದಾಖಲಿಸಲು ಜೂನ್ 17ರಂದು ಬುಲಂದ್‌ಶಹರ್ ನಗರದ ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಂತ್ರಸ್ತನ ಪೋಷಕರು ತೆರಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆರೋಪವನ್ನು ಪುಷ್ಟೀಕರಿಸಲು ಹಲ್ಲೆಯ ವೈರಲ್ ವಿಡಿಯೊವನ್ನು ಬಳಸಿದ್ದಾರೆ.
ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡ ನಂತರ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಬಂಧನವಾಗಿದೆ.
ಬಂಧನದ ಸುದ್ದಿಯನ್ನು ದೃಢಪಡಿಸಿರುವ ಬಲಂದ್‌ಶಹರ್ ನಗರದ ಸಹಾಯಕ ಪೊಲೀಸ್ ಅಧೀಕ್ಷಕ ಎಸ್.ಎನ್.ತಿವಾರಿ, "ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವೈರಲ್ ವಿಡಿಯೊವನ್ನು ಪರಿಶೀಲಿಸಿದಾಗ, ಮೊಬೈಲ್ ಕಳವಿನ ಶಂಕೆಯಲ್ಲಿ ಅದೇ ಗ್ರಾಮದ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿರುವುದು ಕಂಡು ಬಂದಿದೆ. ಸಂತ್ರಸ್ತನ ಕುಟುಂಬದ ಸದಸ್ಯರು ದಾಖಲಿಸಿರುವ ದೂರನ್ನು ಆಧರಿಸಿ ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಪ್ರಗತಿಯಲ್ಲಿದೆ" ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳು ತಮ್ಮನ್ನು ಬೆದರಿಸುವುದು ಮುಂದುವರಿದಿದೆ ಎಂದು ಸಂತ್ರಸ್ತ ಯುವಕನ ತಾಯಿ ನೂರ್ ಬಾನೊ ಕಳವಳ ವ್ಯಕ್ತಪಡಿಸಿದ್ದಾರೆ. "ಅವರು ಬಲಾಢ್ಯ ವ್ಯಕ್ತಿಗಳಾಗಿದ್ದು, ನಮಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಲಿದ್ದಾರೆ. ನಾವು ಬಡವರಾಗಿದ್ದು, ನನ್ನ ಪುತ್ರ ಕೇವಲ ಪೇಂಟಿಂಗ್ ಕೆಲಸ ಮಾಡುತ್ತಾನೆ" ಎಂದು ಅಳಲು ತೋಡಿಕೊಂಡಿದ್ದಾರೆ. ಆಕೆಯ ಪತಿ ಶಕೀಲ್ ಕೂಡಾ ಆಕೆಯ ಆತಂಕಕ್ಕೆ ದನಿಗೂಡಿಸಿದ್ದು, ನನ್ನ ಪುತ್ರನಿಗೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದ್ದಾರೆ.