ಬಿಹಾರ | ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು
PC: ndtv
ಪಾಟ್ನಾ: ಟ್ರ್ಯಾಕ್ಟರ್ ಕದ್ದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಇಡೀ ರಾತ್ರಿ ಗುಂಪೊಂದು ಥಳಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಬಿಹಾರದ ಮುಝಾಫ್ಫರ್ಪುರ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಕ್ಷಮೆ ಕೋರಿದರೂ, ಗುಂಪು ಆತನನ್ನು ಥಳಿಸುವುದನ್ನು ನಿಲ್ಲಿಸಿಲ್ಲ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ರಾಜ್ಯ ರಾಜಧಾನಿ ಪಾಟ್ನಾದಿಂದ ಸುಮಾರು 70 ಕಿಮೀ ದೂರವಿರುವ ಮುಝಫ್ಫರ್ಪುರ್ನ ಉತ್ತರ ರಾಜ್ಖಂಡ್ ಪಂಚಾಯತಿ ವ್ಯಾಪ್ತಿಯ ಯೋಗಿಯ ಗ್ರಾಮದಿಂದ ಈ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಶಂಭು ಸಾಹ್ನಿ ಎಂದು ಗುರುತಿಸಲಾಗಿದ್ದು, ಆತನೊಂದಿಗೆ ಇನ್ನೂ ಮೂವರು ಇದ್ದರು ಎನ್ನಲಾಗಿದೆ. ಆದರೆ, ಅವರು ಘಟನಾ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಲೇ ಶಂಭು ಸಾಹ್ನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಶಂಭು ತನ್ನ ಮೂವರು ಸ್ನೇಹಿತರೊಂದಿಗೆ ಟ್ರ್ಯಾಕ್ಟರ್ ಕದಿಯಲು ಸ್ಥಳಕ್ಕೆ ಬಂದಿದ್ದ ಎನ್ನಲಾಗಿದೆ. ಭಾರಿ ಸದ್ದು ಕೇಳಿದ ಗ್ರಾಮಸ್ಥರು ನಿದ್ದೆಯಿಂದ ಎಚ್ಚೆತ್ತು ಅವರನ್ನು ಹಿಂಬಾಲಿಸಿದಾಗ, ಶಂಭು ಸಾಹ್ನಿ ಅವರ ಕೈಗೆ ಸಿಕ್ಕಿ ಬಿದ್ದ ಎಂದು ಟ್ರ್ಯಾಕ್ಟರ್ ಮಾಲಕ ತಿಳಿಸಿದ್ದಾರೆ.
ಈ ಘಟನೆಯ ಸಂಬಂಧ ಟ್ರ್ಯಾಕ್ಟರ್ ಮಾಲಕ ಗಂಗಾ ಸಾಹ್ನಿ ಹಾಗೂ ಆತನ ಸೋದರಳಿಯ ಪುಕಾರ್ ಸಾಹ್ನಿಯನ್ನು ಬಂಧಿಸಲಾಗಿದ್ದು, ಅವರನ್ನು ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.