ತಿಂಡಿ ಖರೀದಿಸಲು 20 ರೂ ಕೊಡುವಂತೆ ಒತ್ತಾಯಿಸಿದ ಬಾಲಕನನ್ನು ಕೊಲೆಗೈದು ಚರಂಡಿಗೆ ಎಸೆದ ಯುವಕ!
ಸಾಂದರ್ಭಿಕ ಚಿತ್ರ
ಮೀರತ್: ಒಂಬತ್ತು ವರ್ಷದ ಬಾಲಕನೋರ್ವ ತಿಂಡಿ ಖರೀದಿಸಲು 20 ರೂ. ಕೊಡುವಂತೆ ಪದೇ ಪದೇ ಕೇಳಿದ್ದರಿಂದ ಕೋಪಗೊಂಡ ಯುವಕನೋರ್ವ ಬಾಲಕನನ್ನು ಥಳಿಸಿ ಕೊಲೆಗೈದು ಚರಂಡಿಗೆ ಎಸೆದಿದ್ದಾನೆಂದು ಮೀರತ್ ಪೊಲೀಸರು ತಿಳಿಸಿದ್ದಾರೆ.
ಲಕ್ಕಿ ಸಕ್ಸೇನಾ ಕೊಲೆಯಾದ ಬಾಲಕ. ಅಂಕಿತ್ ಜೈನ್ (29) ಎಂಬಾತ ಈ ಕೃತ್ಯವನ್ನು ಎಸಗಿದ್ದು, ಈತ ಈ ಹಿಂದೆ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಅಂಕಿತ್ ಜೈನ್ ಬಾಲಕನ ಮೃತದೇಹವನ್ನು ವಿಲೇವಾರಿ ಮಾಡುವ ಮೊದಲು ಅನುಮಾನ ಬಾರದಂತೆ ಸಾಗಿಸಲು ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಬ್ಯಾಗ್ ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ನಾಪತ್ತೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಸುಮಾರು 10 ದಿನಗಳ ನಂತರ ಜನವರಿ 8 ರಂದು ಬಾಲಕನ ಮೃತದೇಹವು ಚರಂಡಿಯಲ್ಲಿ ಪತ್ತೆಯಾಗಿತ್ತು. ಮೀರತ್ ನಗರ ಎಸ್ಪಿ ಆಯುಷ್ ವಿಕ್ರಮ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ತನಿಖೆಯ ಸಮಯದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಡೆಲಿವರಿ ಬ್ಯಾಗ್ ನೊಂದಿಗೆ ಜೈನ್ ತೆರಳುತ್ತಿರುವುದು ಒಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ನಡೆಸಿದ ತನಿಖೆ ಬಳಿಕ ಅಂಕಿತ್ ಜೈನ್ ನನ್ನು ಬಂಧಿಸಲಾಗಿದೆ. ಆರೋಪಿ ಅಂಕಿತ್ ಜೈನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಪಹರಣ, ಕೊಲೆ, ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೈನ್ ಮತ್ತು ಬಾಲಕನ ಚಿಕ್ಕಪ್ಪ ಪರಿಚಯಸ್ಥರಾಗಿದ್ದರು. ಅಪರಾಧದ ದಿನ, ಜೈನ್ ನನ್ನು ನೋಡಿದ ಲಕ್ಕಿ ಸಕ್ಸೇನಾ 20 ರೂ. ಕೊಡುವಂತೆ ಕೇಳಿದ್ದಾನೆ. ಹಣ ನೀಡುವಂತೆ ಪದೇ ಪದೇ ಒತ್ತಾಯಿಸಿದ್ದಾನೆ. ಈ ವೇಳೆ ಮಧ್ಯಪಾನ ಮಾಡಿದ್ದ ಅಂಕಿತ್ ಬಾಲಕನಿಗೆ ಥಳಿಸಿ ಕೊಲೆ ಮಾಡಿ ಮೃತದೇಹವನ್ನು ಡೆಲಿವರಿ ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ ತನ್ನ ಮನೆಯಿಂದ 700 ಮೀಟರ್ ದೂರದಲ್ಲಿರುವ ಚರಂಡಿಗೆ ಎಸೆದಿದ್ದಾನೆ.