ಪ್ರೀತಿಸಿದ ಯುವಕನನ್ನು ಮದುವೆಯಾಗುವುದಾಗಿ ಹಠ ಹಿಡಿದ ಪುತ್ರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ತಂದೆ
ಮದುವೆಗೆ ಕೇವಲ ನಾಲ್ಕು ದಿನಗಳಿರುವಾಗ ಪೊಲೀಸರ ಸಮ್ಮುಖದಲ್ಲೇ ನಡೆದ ಘಟನೆ!
Photo | NDTV
ಗ್ವಾಲಿಯರ್: ಅವಳ ಮದುವೆಗೆ ನಾಲ್ಕು ದಿನ ಮಾತ್ರ ಬಾಕಿ ಇತ್ತು, ಆದರೆ ಆಕೆ ಮಾತ್ರ ಬೇರೊಬ್ಬನನ್ನು ಮದುವೆಯಾಗಲು ಬಯಸಿದ್ದಕ್ಕೆ ಆಕೆಯ ತಂದೆಯೇ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ನಡೆದಿದೆ.
ತನು ಗುರ್ಜಾರ್(20) ಹತ್ಯೆಯಾದ ಯುವತಿ. ಗೋಲಾ ಕಾ ಮಂದಿರ ಪ್ರದೇಶದ ಮನೆಯಲ್ಲಿ ಜನವರಿ 18ರಂದು ಈಕೆಯ ವಿವಾಹ ನಡೆಯಬೇಕಿತ್ತು. ಆದರೆ ನಡೆಯಬಾರದ ಘಟನೆಯೇ ನಡೆದಿದ್ದು, ಮದುವೆ ಮನೆಯಲ್ಲಿ ನೆತ್ತರು ಹರಿದಿದೆ.
ಏನಿದು ಘಟನೆ?
ತನು ಗುರ್ಜಾರ್ ಎಂಬ ಯುವತಿ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿರುವ ಭಿಕಮ್ ವಿಕ್ಕಿಯನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಇವರಿಬ್ಬರ ವಿವಾಹಕ್ಕೆ ತನು ಕುಟುಂಬ ಒಪ್ಪಿಗೆ ಸೂಚಿಸಿತ್ತು. ಆದರೆ ಕೊನೆಗೆ ಮತ್ತೋರ್ವನ ಜೊತೆ ವಿವಾಹಕ್ಕೆ ಸಿದ್ದತೆ ನಡೆಸಿತ್ತು. ಇದಕ್ಕೆ ತನು ವಿರೋಧಿಸಿದ್ದು, ಪ್ರೀಯಕರನನ್ನೇ ವಿವಾಹವಾಗುವುದಾಗಿ ಹಠ ಹಿಡಿದಿದ್ದಳು.
ಈ ಬಗ್ಗೆ ತನು ಗುರ್ಜಾರ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾಳೆ. 52 ಸೆಕೆಂಡುಗಳ ವೀಡಿಯೊದಲ್ಲಿ ʼನನ್ನ ಕುಟುಂಬವು ನನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದೆ. ನನ್ನ ತಂದೆ ಮಹೇಶ್ ಮತ್ತು ಕುಟುಂಬದ ಇತರ ಸದಸ್ಯರು ನನ್ನ ನೋವಿಗೆ ಕಾರಣ, ನನಗೆ ಜೀವ ಭಯವಿದೆ. ನಾನು ವಿಕ್ಕಿಯನ್ನು ಮದುವೆಯಾಗಲು ಬಯಸುತ್ತೇನೆ. ನನ್ನ ಮನೆಯವರು ಆರಂಭದಲ್ಲಿ ಒಪ್ಪಿದರು ಆದರೆ, ನಂತರ ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ಅವರು ನನ್ನನ್ನು ಪ್ರತಿದಿನ ಥಳಿಸುತ್ತಿದ್ದಾರೆ. ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನನಗೆ ಏನಾದರೂ ಸಂಭವಿಸಿದರೆ ನನ್ನ ಕುಟುಂಬಸ್ಥರು ನೇರ ಹೊಣೆಯಾಗುತ್ತಾರೆʼ ಎಂದು ತನು ವೀಡಿಯೊದಲ್ಲಿ ಹೇಳಿದ್ದಾರೆ.
ವೀಡಿಯೊ ವೈರಲ್ ಬೆನ್ನಲ್ಲೇ ಎಸ್ಪಿ ಧರ್ಮವೀರ್ ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಲು ತನು ಅವರ ಮನೆಗೆ ಆಗಮಿಸಿದ್ದರು. ಈ ವೇಳೆ ನಾನು ಮನೆಯಲ್ಲಿ ಇರುವುದಿಲ್ಲ, ನನ್ನನ್ನು ಆಶ್ರಯ ಕೇಂದ್ರಕ್ಕೆ ದಾಖಲಿಸಿ ಎಂದು ತನು ಒತ್ತಾಯಿಸಿದ್ದಾರೆ. ಈ ವೇಳೆ ಮಹೇಶ್ ಆಕೆಯ ಜೊತೆ ಮಾತನಾಡಬೇಕೆಂದು ಪಕ್ಕಕ್ಕೆ ಕರೆದೊಯ್ದು ಮಗಳ ಜೊತೆ ಮಾತನಾಡುತ್ತಾ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪಕ್ಕದಲ್ಲಿದ್ದ ಸೋದರ ಸಂಬಂಧಿ ರಾಹುಲ್ ಆಕೆಯ ಕುತ್ತಿಗೆ, ಕಣ್ಣು ಮತ್ತು ಮೂಗಿನ ನಡುವಿನ ಭಾಗಕ್ಕೆ ಗುಂಡಿಕ್ಕಿದ್ದಾನೆ. ಈ ವೇಳೆ ಕುಸಿದು ಬಿದ್ದು ತನು ಗುರ್ಜಾರ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನಂತರ ಮಹೇಶ್ ಮತ್ತು ರಾಹುಲ್ ಪೊಲೀಸರು ಮತ್ತು ತಮ್ಮದೇ ಕುಟುಂಬದ ಇತರ ಸದಸ್ಯರ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಹೇಶನನ್ನು ಬಂಧಿಸಿದ್ದು, ರಾಹುಲ್ ಪಿಸ್ತೂಲ್ ನೊಂದಿಗೆ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.