ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ನಂತರ ಕುಸಿದು ಬಿದ್ದು ಆರೋಪಿ ಪತಿಯೂ ಸಾವು !
ಸಾಂದರ್ಭಿಕ ಚಿತ್ರ (PTI)
ಥಾಣೆ: ಮಹಾರಾಷ್ಟ್ರದ ಥಾಣೆ ನಗರದ ಕುಂಭರ್ ಅಲಿ ಪ್ರದೇಶದ ತನ್ನ ನಿವಾಸದಲ್ಲಿ ತನ್ನ ಪತ್ನಿಯನ್ನು ಗುಂಡಿಕ್ಕಿ ಸಾಯಿಸಿದ 56 ವರ್ಷದ ವ್ಯಕ್ತಿಯೊಬ್ಬ ನಂತರ ಕುಸಿದು ಮೃತಪಟ್ಟಿದ್ದಾನೆ. ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆಂದು ಶಂಕಿಸಲಾಗಿದೆ.
ಕುಂಭರ್ ಅಲಿ ಪ್ರದೇಶದ ಯಶವಂತ್ ನಿವಾಸ್ ಕಟ್ಟಡದಲ್ಲಿ ಶುಕ್ರವಾರ ರಾತ್ರಿ 10.15ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ದಿಲೀಪ್ ಸಾಲ್ವಿ ಮತ್ತಾತನ ಪತ್ನಿ ಪ್ರಮೀಳಾ (51) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ದಿಲೀಪ್ ಮನೆಗೆ ವಾಪಸಾದ ಬೆನ್ನಲ್ಲೇ ಗಂಡ ಹೆಂಡತಿ ನಡುವೆ ಜಗಳ ಶುರವಾಗಿತ್ತು. ಸಿಟ್ಟುಗೊಂಡ ದಿಲೀಪ್ ತನ್ನ ರಿವಾಲ್ವರ್ ಹೊರಗೆಳೆದು ಹೆಂಡತಿಯತ್ತ ಎರಡು ಸುತ್ತು ಗುಂಡು ಹಾರಿಸಿದ್ದ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಹೃದಯಾಘಾತಕ್ಕೊಳಗಾಗಿ ದಿಲೀಪ್ ಕೂಡ ಕುಸಿದು ಸಾವನ್ನಪ್ಪಿದ್ದಾನೆ.
ಮೂಲಗಳ ಪ್ರಕಾರ ಗಂಡ ಗುಂಡಿಕ್ಕುತ್ತಲೇ ಪ್ರಮೀಳಾ ಜೋರಾಗಿ ಚೀರಿ ಮಗನನ್ನು ಕರೆದಿದ್ದರು. ಆದರೆ ಆತ ಬರುವಷ್ಟರಲ್ಲಿ ಪ್ರಮೀಳಾ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಈ ಹತ್ಯೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ದಿಲೀಪ್ ಸಾಲ್ವಿ ಥಾಣೆಯ ಕಲ್ವಾ ಪ್ರದೇಶದ ಪ್ರಭಾವಿ ಕುಟುಂಬವೊಂದಕ್ಕೆ ಸೇರಿದವನೆನ್ನಲಾಗಿದ್ದು ಆತನ ಕುಟುಂಬದವರು ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಯೋಜನೆಗಳಿಗೆ ಆತನ ತಂದೆ ದಿವಂಗತ ಯಶವಂತ್ ರಮಾ ಸಾಲ್ವಿ ಅವರ ಹೆಸರು ನೀಡಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.