ಜಾರ್ಖಂಡ್: ಮಾವೋವಾದಿಗಳಿಂದ ಪೊಲೀಸ್ ಮಾಹಿತಿದಾರನ ಗುಂಡಿಕ್ಕಿ ಹತ್ಯೆ
ಚಾಯ್ಬಾಸಾ : ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ನೆಲ್ಸನ್ ಭೆಂಗ್ರಾ ಎಂದು ಗುರುತಿಸಲಾಗಿದೆ. ಇಚಾಪಿಡಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಅವರನ್ನು ಮಾವೋವಾದಿಗಳು ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.
ಭೆಂಗ್ರಾ ನಿಷೇಧಿತ ಸಿಪಿಐ (ಮಾವೋವಾದಿ) ಗಳೊಂದಿಗೆ ನಂಟು ಹೊಂದಿದ್ದರು. ಮಾವೋವಾದಿಗಳು ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಎಸೆಯಲಾದ ಕರಪತ್ರದಲ್ಲಿ ಮಾವೋವಾದಿಗಳು ಈ ಹತ್ಯೆಯ ಹೊಣೆ ಹೊತ್ತಿಕೊಂಡಿರುವುದಾಗಿ ಪ್ರತಿಪಾದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೆಂಗ್ರಾ ಅವರು ಮಾವೋವಾದಿಗಳೊಂದಿಗೆ ಸಂಬಂಧ ಕಡಿದುಕೊಂಡಿದ್ದರು ಹಾಗೂ ನಿರ್ಮಾಣ ನಿವೇಶನದಲ್ಲಿ ರಾತ್ರಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಭೆಂಗ್ರಾ ಅವರ ಕುಟುಂಬ ಹೇಳಿದೆ.