ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದೆ ಎಂಬ ಆರೋಪವಿದೆ ಎಂದು ಹೇಳಿ ನಂತರ ಕ್ಷಮೆಯಾಚಿಸಿದ ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್ (PTI)
ಹೊಸದಿಲ್ಲಿ: ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, 1962ರಲ್ಲಿ ಭಾರತದ ಮೇಲೆ ಚೀನಾ ಆಕ್ರಮಣ ನಡೆಸಿತ್ತು ಎಂಬ ಆರೋಪವಿದೆ ಎಂಬ ಹೇಳಿಕೆ ನೀಡಿ ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದ್ದಾರೆ. ತಮ್ಮ ಹೇಳಿಕೆಯಲ್ಲಿ ಬಳಸಿದ್ದ ‘ಆರೋಪ’ ಎಂಬ ಪದದ ಕುರಿತು ಅವರು ನಂತರ ಕ್ಷಮೆ ಯಾಚಿಸಿದ್ದಾರಾದರೂ, ಈ ಹೇಳಿಕೆಯ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಬಿಜೆಪಿ, ಈ ಮಾತು ನಿರ್ಲಜ್ಜ ಪರಿಷ್ಕರಣವಾದ ಎಂದು ಕಿಡಿ ಕಾರಿದೆ.
ಮಂಗಳವಾರ ಸಂಜೆ ವಿದೇಶಾಂಗ ಪ್ರತಿನಿಧಿಗಳ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ತಮ್ಮ ‘Nehru’s First Recruit’ ಕೃತಿ ಬಿಡುಗಡೆಯ ಸಮಾರಂಭದಲ್ಲಿ ಮಣಿಶಂಕರ್ ಅಯ್ಯರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ತಮ್ಮ ಮಾತಿನಲ್ಲಿನ ತಪ್ಪು ಅರಿವಾಗಿ ಕೂಡಲೇ ಬೇಷರತ್ ಕ್ಷಮೆಯನ್ನೂ ಯಾಚಿಸಿದ್ದರು. ಕೃತಿ ಬಿಡುಗಡೆಯ ಸಂದರ್ಭದಲ್ಲಿ ಅವರು ಒಂದು ಉಪಾಖ್ಯಾನವನ್ನು ವಿವರಿಸುವಾಗ, ಬಾಯಿ ತಪ್ಪಿ “ಅಕ್ಟೋಬರ್ 1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿತು ಎಂಬ ಆರೋಪವಿದೆ” ಎಂದು ಹೇಳಿದ್ದರು.
ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅಯ್ಯರ್ ತಮ್ಮ ಹೇಳಿಕೆಯ ಬೆನ್ನಿಗೇ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಅವರು ಆಕ್ರಮಣದ ಆರೋಪ ಎಂಬ ಪದವನ್ನು ಬಾಯಿ ತಪ್ಪಿ ಬಳಸಿದ್ದಾರೆ. ಅವರು ಬಳಸಿರುವ ಮೂಲ ನುಡಿಗಟ್ಟಿನಿಂದ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮೇ 2020ರಲ್ಲಿ ಭಾರತದ ಮೇಲೆ ಆಕ್ರಮಣ ನಡೆಸಿದ್ದ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಕ್ಲೀನ್ ಚಿಟ್ ನೀಡಿದ್ದರು ಎಂದೂ ಅವರು ಆರೋಪಿಸಿದ್ದಾರೆ.
ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಖಂಡಿಸಿದ್ದಾರೆ.