ಮಣಿಪುರ | ಶಾಂತಿ ಮಾತುಕತೆಗಳಿಗೆ ಕುಕಿ-ರೆ ಶಾಸಕರಿಂದ ಪ್ರತ್ಯೇಕ ಆಡಳಿತಕ್ಕಾಗಿ ಷರತ್ತು
PC : PTI
ಇಂಫಾಲ : ಮಣಿಪುರದ ಕುಕಿ-ರೆ ಶಾಸಕರು ಶಾಂತಿ ಮಾತುಕತೆಗಾಗಿ ತಮ್ಮ ಸಮುದಾಯಕ್ಕೆ ಪ್ರತ್ಯೇಕ ಆಡಳಿತದ ಷರತ್ತನ್ನು ಮುಂದಿರಿಸಿದ್ದಾರೆ.
ರಾಜ್ಯದಲ್ಲಿಯ ಕುಕಿ ಗುಂಪುಗಳು ತಮ್ಮದೇ ಆದ, ಶಾಸಕಾಂಗವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಕ್ಕಾಗಿ ಆಗ್ರಹಿಸುತ್ತಿವೆ.
ಕುಕಿ-ರೆ-ಹಮಾರ್,ಮೈತೈ ಮತ್ತು ನಾಗಾ ಸಮುದಾಯಗಳನ್ನು ಪ್ರತಿನಿಧಿಸುವ ಮಣಿಪುರ ಶಾಸಕರು ದಿಲ್ಲಿಯಲ್ಲಿ ಸಭೆ ನಡೆಸಿದ್ದು, ಇನ್ನಷ್ಟು ಅಮಾಯಕ ನಾಗರಿಕರ ಅಮೂಲ್ಯ ಜೀವಗಳ ನಷ್ಟವನ್ನು ತಪ್ಪಿಸಲು ಹಿಂಸಾಚಾರದ ಮಾರ್ಗವನ್ನು ತೊರೆಯುವಂತೆ ರಾಜ್ಯದಲ್ಲಿಯ ಎಲ್ಲ ಸಮುದಾಯಗಳಿಗೆ ಮನವಿ ಮಾಡಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಗೃಹ ಸಚಿವಾಲಯವು ಮಂಗಳವಾರ ತಿಳಿಸಿದೆ.
ಕುಕಿ-ರೆ ಶಾಸಕರು ನಂತರ ಹೊರಡಿಸಿದ ಹೇಳಿಕೆಯಲ್ಲಿ, ತಾವು ಪ್ರತ್ಯೇಕ ಕೊಠಡಿಯಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳು ಮತ್ತು ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು,ಮೈತೈ ಮತ್ತು ನಾಗಾ ಶಾಸಕರೊಂದಿಗೆ ಯಾವುದೇ ಜಂಟಿ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಂಟಿ ಸಭೆಗಳಲ್ಲಿ ಪಾಲ್ಗೊಳ್ಳಲು ತಾವು ಬಯಸುವುದಿಲ್ಲ, ಸಂಪೂರ್ಣ ಸಾರ್ವಜನಿಕ ಸಮಾಲೋಚನೆಗಳ ನಂತರವಷ್ಟೇ ಇಂತಹ ಸಭೆಗಳನ್ನು ಕರೆಯಬಹುದು ಎಂದು ಅವರು ತಿಳಿಸಿದ್ದಾರೆ.
ಕುಕಿ-ರೆ ಶಾಸಕರು ಮತ್ತು ಭಾರತ ಸರಕಾರದ ನಡುವಿನ ಮಾತುಕತೆಗಳಲ್ಲಿ ಕುಕಿ-ರೆ ಪ್ರತಿನಿಧಿಗಳು ತಾವು ಜನರ ಧ್ವನಿಯನ್ನು ಪ್ರತಿನಿಧಿಸುತ್ತಿದ್ದೇವೆ ಮತ್ತು ಅವರ ಬಗ್ಗೆ ಮಾತ್ರ ಪ್ರತಿಪಾದಿಸುತ್ತೇವೆ ಎನ್ನುವುದನ್ನು ದೃಢಪಡಿಸಿದರು. ಯಾವುದೇ ಶಾಂತಿ ಮಾತುಕತೆಗೆ ಕುಕಿ-ರೆ ಸಮುದಾಯಕ್ಕಾಗಿ ಪ್ರತ್ಯೇಕ ಆಡಳಿತವು ಪೂರ್ವ ಅಗತ್ಯವಾಗಿದೆ ಎಂದೂ ಅವರು ಪ್ರತಿಪಾದಿಸಿದರು ಎಂದು ಕುಕಿ-ರೆ ಶಾಸಕರ ಸಂಚಾಲಕ ಕಾರ್ಯದರ್ಶಿ ಚಿನ್ಲುಂಥಾಂಗ್ ತಿಳಿಸಿದರು.
ಮಾತುಕತೆಗಳು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಿಭಾಯಿಸುವಲ್ಲಿ ಕೇಂದ್ರಕ್ಕೆ ನೆರವಾಗಲು ಕಣ್ಣೊರೆಸುವ ಮತ್ತು ಪ್ರಚಾರ ತಂತ್ರವಾಗಿತ್ತು ಎಂದು ಕುಕಿ ಸಮುದಾಯಕ್ಕೆ ಸೇರಿದ ಬಿಜೆಪಿ ಶಾಸಕ ಪಾವೊಲಿನ್ಲಾಲ್ ಹಾವೊಕಿಪ್ ಹೇಳಿದರು. ಅವರು ಸಭೆಗಳಿಗೆ ಹಾಜರಾಗಿರಲಿಲ್ಲ.
ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಬಿಜೆಪಿ ನಾಯಕರು ಕುಕಿ-ರೆ ಶಾಸಕರೊಂದಿಗೆ ಎರಡು ಗಂಟೆಗಳ ಕಾಲ ಸಭೆಯನ್ನು ನಡೆಸಿದ್ದರು, ನಂತರ ನಾಗಾ ಮತ್ತು ಮೈತೈ ಶಾಸಕರೊಂದಿಗೆ ತಲಾ ಸುಮಾರು 15 ನಿಮಿಷಗಳ ಸಂಕ್ಷಿಪ್ತ ಸಭೆಗಳು ನಡೆದಿದ್ದವು. ಈ ಸಭೆಗಳಲ್ಲಿ ಗಣನೀಯ ಚರ್ಚೆಗಳು ನಡೆದಿರಲಿಲ್ಲ. ಹಿಂಸಾಚಾರವನ್ನು ನಿಲ್ಲಿಸುವ ಭರವಸೆ ದೊರೆಯುವವರೆಗೆ ಯಾವುದೇ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ ಎಂದು ಬಲ್ಲ ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಮೇ 2023ರಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷಗಳು ಭುಗಿಲೆದ್ದ ಬಳಿಕ ಇದು ಕೇಂದ್ರವು ಆಯೋಜಿಸಿದ್ದ ಶಾಸಕರ ಮೊದಲ ಔಪಚಾರಿಕ ಸಭೆಯಾಗಿತ್ತು.
ಮಣಿಪುರ ವಿಧಾನಸಭೆಯು 60 ಶಾಸಕರನ್ನು ಹೊಂದಿದ್ದು, ಇವರಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳಿಗೆ ಸೇರಿದ ತಲಾ 10 ಶಾಸಕರು ಸೇರಿದ್ದಾರೆ.