ಮಣಿಪುರ | ಭದ್ರತಾ ಪಡೆಯಿಂದ ರಾಕೆಟ್, ಮೋರ್ಟರ್ ವಶ
PC : Courtesy Manipur police \ X
ಇಂಫಾಲ : ಮಣಿಪುರ ಪೊಲೀಸರು ಇತರ ಭದ್ರತಾ ಪಡೆಗಳೊಂದಿಗೆ ಗುಡ್ಡಗಾಡು ಹಾಗೂ ಕಣಿವೆ ಜಿಲ್ಲೆಗಳಲ್ಲಿ ಗುರುವಾರ ಶೋಧ ಕಾರ್ಯಾಚರಣೆ ನಡೆಸಿ ರಾಕೆಟ್, ಸುಧಾರಿತ ಮೋರ್ಟರ್ ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
‘‘ಗುಡ್ಡಗಾಡು ಹಾಗೂ ಕಣಿವೆ ಜಿಲ್ಲೆಗಳ ಅಂಚು ಹಾಗೂ ಸುಲಭವಾಗಿ ದಾಳಿಗೆ ತುತ್ತಾಗುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ’’ ಎಂದು ಮಣಿಪುರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸರಿಸುಮಾರು 8 ಅಡಿ ಉದ್ದದ 2 ರಾಕೆಟ್ಗಳು, ಸುಮಾರು 7 ಅಡಿ ಉದ್ದದ 2 ರಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ದೇಶಿ ನಿರ್ಮಿತ 2 ಮೋರ್ಟರ್, ದೇಶಿ ನಿರ್ಮಿತ ಮಧ್ಯಮ ಗಾತ್ರದ 1 ಮೋರ್ಟರ್, 3 ಸುಧಾರಿತ ಮೋರ್ಟರ್ ಬಾಂಬ್, 1 ರೇಡಿಯೋ ಸೆಟ್ ಹಾಗೂ 2 ದೇಶಿ ನಿರ್ಮಿತ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಶಸ್ತ್ರಾಸ್ತ್ರಗಳನ್ನು ಚುರಾಚಂದಪುರ ಜಿಲ್ಲೆಯ ಪಂಜಾಂಗ್ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮಣಿಪುರ ಪೊಲೀಸರು ನಿಷೇಧಿತ ಸಂಘಟನೆ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಮಣಿಪುರ (ಪಂಬೈ)ದ 8 ಮಂದಿ ಶಂಕಿತ ಉಗ್ರರನ್ನು ಥೌಬಾಲ್ ಜಿಲ್ಲೆಯಿಂದ ಬಂಧಿಸಿದ್ದರು. ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದರು.
ಥೌಬಾಲ್ ಜಿಲ್ಲೆಯಲ್ಲಿ ಜನರಿಗೆ ಬೆದರಿಕೆ ಒಡ್ಡಿದ ಹಾಗೂ ಭೂಮಿ ಗುರುತಿಸುವ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಿದ ಆರೋಪದಲ್ಲಿ ಇವರನ್ನು ಸೋಮವಾರ ಬಂಧಿಸಲಾಗಿತ್ತು.