ಮಣಿಪುರ | ಭದ್ರತಾ ಪಡೆಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳ ವಶ
PC : PTI
ಇಂಫಾಲ : ಕಳೆದ ಮೂರು ದಿನಗಳಿಂದ ಮಣಿಪುರದ ಕಣಿವೆ ಜಿಲ್ಲೆಗಳಲ್ಲಿ ನಡೆಸಲಾಗಿರುವ ಶೋಧ ಕಾರ್ಯಾಚರಣೆಯಲ್ಲಿ ಹಲವಾರು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸುಧಾರಿತ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಅಸ್ಸಾಂ ರೈಫಲ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಶನಿವಾರ ಚೂರ್ ಚಂದ್ ಪುರ್ ಜಿಲ್ಲೆಯಲ್ಲಿನ ಎಲ್.ಖೊನೊಂಫೈ ಗ್ರಾಮದ ಅರಣ್ಯದಲ್ಲಿ ಅಸ್ಸಾಂ ರೈಫಲ್ಸ್ ಹಾಗೂ ಮಣಿಪುರ ಪೊಲೀಸರು ಜಂಟಿಯಾಗಿ ನಡೆಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಒಂದು .303 ರೈಫಲ್, ಎರಡು 9ಎಂಎಂ ಪಿಸ್ತೂಲ್ ಗಳು, ಆರು ಏಕ ನಳಿಕೆ ರೈಫಲ್ ಗಳು, ಒಂದು .22 ರೈಫಲ್, ಮದ್ದುಗುಂಡುಗಳು ಹಾಗೂ ಇನ್ನಿತರ ಯುದ್ಧ ಸಾಮಾಗ್ರಿಯಂತಹ ಸಂಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ಪೋಕ್ಪಿ ಜಿಲ್ಲೆಯ ಎಸ್.ಚೌಂಗೌಬುಂಗ್ ಹಾಗೂ ಮಾವೊಹಿಂಗ್ ನಡುವೆ ನಡೆದ ಮತ್ತೊಂದು ಶೋಧ ಕಾರ್ಯಾಚರಣೆಯಲ್ಲಿ ಒಂದು 5.56 ಎಂಎಂ ಇನ್ಸಾಸ್ ರೈಫಲ್, ಒಂದು ಪಾಯಿಂಟ್ 303 ರೈಫಲ್, ಎರಡು ಎಸ್ಬಿಬಿಎಲ್ ಗನ್ ಗಳು, ಎರಡು 0.22 ಪಿಸ್ತೂಲ್ ಗಳು, ಎರಡು ಸುಧಾರಿತ ಪ್ರೊಜೆಕ್ಟೈಲ್ ಲಾಂಚರ್ ಗಳು, ಗ್ರೆನೇಡ್ ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರವಿವಾರ ಕಾಕ್ ಚಿಂಗ್ ಜಿಲ್ಲೆಯ ಉತಂಗ್ ಪೋಕ್ಪಿ ಸಾಮಾನ್ಯ ಪ್ರದೇಶದಲ್ಲಿ ನಡೆಸಲಾದ ಗುಪ್ತಚರ ಮಾಹಿತಿ ಆಧಾರಿತ ಶೋಧ ಕಾರ್ಯಾಚರಣೆಯಲ್ಲಿ ಅಸ್ಸಾಂ ರೈಫಲ್ಸ್, ಮಣಿಪುರ ಪೊಲೀಸರು ಹಾಗೂ ಬಿಎಸ್ಎಫ್ ಜಂಟಿ ತಂಡವು ಒಂದು 0.22 ರೈಫಲ್, ಮದ್ದುಗುಂಡುಗಳು ಹಾಗೂ ಯುದ್ಧ ಸಾಮಾಗ್ರಿಯಂತಹ ಸಂಗ್ರಹಗಳನ್ನು ವಶಪಡಿಸಿಕೊಂಡಿವೆ.
ವಶಪಡಿಸಿಕೊಳ್ಳಲಾಗಿರುವ ಶಸ್ತ್ರಾಸ್ತ್ರಗಳನ್ನು ಮಣಿಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.