ಮಣಿಪುರ | ಶಂಕಿತ ಬಂಡುಕೋರರ ಹತ್ಯೆ ಪ್ರತಿಭಟಿಸಿ ಬಂದ್ ; ಜಿರಿಬಮ್ ಜಿಲ್ಲೆಯಲ್ಲಿ ಕರ್ಫ್ಯೂ
PC : PTI
ಇಂಫಾಲ : ಹನ್ನೊಂದು ಶಂಕಿತ ಬಂಡುಕೋರರ ಹತ್ಯೆಯನ್ನು ಪ್ರತಿಭಟಿಸಿ ಕುಕಿ-ರೆ ಪ್ರಾಬಲ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಸಂಪೂರ್ಣ ಬಂದ್ ಆಚರಿಸಲಾಯಿತು.
ಬಂದ್ ಹಿನ್ನೆಲೆಯಲ್ಲಿ ಮಣಿಪುರದ ಜಿರಿಬಮ್ ಜಿಲ್ಲಾಡಳಿತವು ಸೋಮವಾರ ಕರ್ಫ್ಯೂ ವಿಧಿಸಿತ್ತು. ಬಂದೂಕುಗಳು, ತಲವಾರುಗಳು, ದೊಣ್ಣೆಗಳು, ಕಲ್ಲುಗಳು ಅಥವಾ ಇತರ ಮಾರಕ ಅಸ್ತ್ರಗಳು, ಚೂಪಾದ ವಸ್ತುಗಳು ಅಥವಾ ಶಸ್ತ್ರಗಳಾಗಿ ಬಳಸಬಹುದಾದ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ಜಿಲ್ಲಾಧಿಕಾರಿಯ ಆದೇಶವು ನಿಷೇಧಿಸಿತ್ತು. ಮಂಗಳವಾರ ಪರಿಸ್ಥಿತಿ ಒಟ್ಟಾರೆ ಶಾಂತವಾಗಿತ್ತು.
ಸೋಮವಾರ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟವರು ‘‘ಗ್ರಾಮ ಸ್ವಯಂಸೇವಕರಾಗಿದ್ದರು’’ ಎಂದು ಕುಕಿ-ರೊ ಕೌನ್ಸಿಲ್ ಹೇಳಿದೆ. ಹತ್ಯೆಯನ್ನು ಪ್ರತಿಭಟಿಸಿ ಬೆಳಗ್ಗೆ 5ರಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸಲು ಅದು ಕರೆ ನೀಡಿತ್ತು.
ಸೋಮವಾರ ಸೇನಾ ಸಮವಸ್ತ್ರದಲ್ಲಿದ್ದ ಬಂಡುಕೋರರು ಜಿರಿಬಮ್ ಜಿಲ್ಲೆಯಲ್ಲಿ ಆಧುನಿಕ ಶಸ್ತ್ರಗಳಿಂದ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್ಪಿಎಫ್ ಶಿಬಿರದ ಮೇಲೆ ಗುಂಡು ಹಾರಿಸಿದ ಬಳಿಕ, ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ 11 ಶಂಕಿತ ಬಂಡುಕೋರರು ಮೃತಪಟ್ಟಿದ್ದಾರೆ.