ಮಣಿಪುರ | ಸಂಪೂರ್ಣ ಬಂದ್ ಗೆ ಕರೆ ; ಇಂಫಾಲ ಕಣಿವೆಯಲ್ಲಿನ ಜೀವನ ಅಸ್ತವ್ಯಸ್ತ
Credit: PTI Photo
ಇಂಫಾಲ: ಜಿರಿಬಾಮ್ ಜಿಲ್ಲೆಯಲ್ಲಿ ನಡೆದಿದ್ದ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳ ಅಪಹರಣವನ್ನು ಪ್ರತಿಭಟಿಸಿ 13 ನಾಗರಿಕ ಹಕ್ಕು ಸಂಘಟನೆಗಳು ಕರೆ ನೀಡಿದ್ದ ಸಂಪೂರ್ಣ ಬಂದ್ ನಿಂದಾಗಿ ಇಂಫಾಲದ ಕಣಿವೆ ಜನಜೀವನ ಅಸ್ತವ್ಯಸ್ತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಆರು ಗಂಟೆಯಿಂದ ಪ್ರಾರಂಭಗೊಂಡಿದ್ದ ಬಂದ್ ನಿಂದಾಗಿ ಇಂಫಾಲ ಕಣಿವೆಯ ಐದು ಜಿಲ್ಲೆಗಳಾದ ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ತೌಬಲ್, ಕಾಕ್ಚಿಂಗ್ ಹಾಗೂ ಬಿಷ್ಣುಪುರ್ ಜಿಲ್ಲೆಗಳಲ್ಲಿನ ವ್ಯಾಪಾರ ವಹಿವಾಟುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿದ್ದವು.
ಖಾಸಗಿ ಹಾಗೂ ಅಂತರ ಜಿಲ್ಲಾ ಸಾರಿಗೆ ಸೇವೆಗಳೂ ಲಭ್ಯವಿರಲಿಲ್ಲ ಹಾಗೂ ಸರಕಾರಿ ಕಚೇರಿಗಳಲ್ಲಿನ ಹಾಜರಾತಿ ನಗಣ್ಯ ಪ್ರಮಾಣದಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಇಂಟರ್ ನ್ಯಾಷನಲ್ ಪೀಸ್ ಆ್ಯಂಡ್ ಸೋಷಿಯಲ್ ಅಡ್ವಾನ್ಸ್ ಮೆಂಟ್ ನೊಂದಿಗೆ ಆಲ್ ಕ್ಲಬ್ಸ್ ಆರ್ಗನೈಸೇಷನ್ಸ್ ಅಸೋಸಿಯೇಷನ್ ಮತ್ತು ಮೀರಾ ಪೈಬಿ ಲುಪ್, ಇಂಡಿಜಿನಸ್ ಪೀಪಲ್ಸ್ ಅಸೋಸಿಯೇಷನ್ ಆಫ್ ಕಾಂಗ್ಲೈಪಾಕ್ ಮತ್ತು ಕಾಂಗ್ಲೈಪಾಕ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಮತ್ತಿತರರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು.
ಈ ಬಂದ್ ಸಂದರ್ಭದಲ್ಲಿ ಇಂಫಾಲ ಕಣಿವೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎನ್ನಲಾಗಿದೆ.
ಆದರೆ, ಸರಕು ಜಿರಿಬಾಮ್ ಬಳಿಯ ನಾಗಾ ಪ್ರಾಬಲ್ಯದ ಟಾಮೆಂಗ್ಲಾಂಗ್ ಜಿಲ್ಲೆಯ ಹಳೆಯ ಕೈಫುಂಡೈ ಬಳಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಎರಡು ಟ್ರಕ್ ಗಳಿಗೆ ಸಶಸ್ತ್ರ ಉಗ್ರರು ಬೆಂಕಿ ಹಚ್ಚಿದರು ಎಂದು ವರದಿಯಾಗಿದೆ.
ಶಂಕಿತ ಉಗ್ರರು ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಸಾಗುತ್ತಿದ್ದ ಟ್ರಕ್ ಗಳನ್ನು ತಡೆದು ನಿಲ್ಲಿಸಿದ್ದಾರೆ. ನಂತರ, ಅವಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯನ್ನು ಬಲವಾಗಿ ಖಂಡಿಸಿರುವ ಮಣಿಪುರದ ರೋಂಗ್ಮೆಯಿ ನಾಗಾ ಸ್ಟೂಡೆಂಟ್ಸ್ ಆರ್ಗನೈಸೇಷನ್, ಈ ಕೃತ್ಯದ ಹಿಂದೆ ಕುಕಿ ಉಗ್ರರ ಕೈವಾಡವಿದೆ ಎಂದು ಆರೋಪಿಸಿದೆ.