ಮಣಿಪುರ | CRPF ಶಿಬಿರದ ಮೇಲೆ ದಾಳಿ ನಡೆಸಿದ್ದ ಸಶಸ್ತ್ರ ವ್ಯಕ್ತಿಗಳು ಸಣ್ಣ ತಪ್ಪಿನಿಂದ ಸ್ವತಃ ಬಲಿಯಾಗಿದ್ದರು!
PC : PTI
ಇಂಫಾಲ 15: ಸೋಮವಾರ ಮಣಿಪುರದ ಜಿರಿಬಾಮ್ ಜಿಲ್ಲೆಯ ಜಕುರಧೋರ್ನಲ್ಲಿ CRPF ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ್ದ 10 ಸಶಸ್ತ್ರ ಉಗ್ರರ ಸಣ್ಣ ತಪ್ಪು ಅವರೆಲ್ಲರ ಜೀವಗಳನ್ನು ಬಲಿ ತೆಗೆದುಕೊಂಡಿತ್ತು. CRPF ಶಿಬಿರದ ಮೇಲೆ ದಾಳಿ ನಡೆಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ಸಮವಸ್ತ್ರದಲ್ಲಿದ್ದ ಉಗ್ರರು ಹೊರಗಡೆ ನಿಲ್ಲಿಸಿದ್ದ ಮಷಿನ್ ಗನ್ ಅಳವಡಿಸಿದ್ದ ವಾಹನವನ್ನು ಗಮನಿಸದೆ ತಕ್ಷಣ ಕೊಲ್ಲಲ್ಪಟ್ಟಿದ್ದರು.
ಉಗ್ರರು ಮೊದಲು ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಲಾಮ್ತೈ ಖುನೊ ಮತ್ತು ಜಕುರಧೋರ್ ಕರಂಗ್ ನಂತಹ ಮೈಥೇಯಿ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದರು. ಅಂಗಡಿಗಳು ಮತ್ತು ಪರಿಹಾರ ಶಿಬಿರಗಳನ್ನು ಗುರಿಯಾಗಿಸಿಕೊಂಡಿದ್ದರು. ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಅವರು CRPF ಪೋಸ್ಟ್ ಮತ್ತು ಬೊರೊಬೆಕ್ರಾ ಪೋಲಿಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು. ತಾವು CRPF ಮತ್ತು ಪೋಲಿಸರನ್ನು ಗುಂಡಿನ ಕಾಳಗದಲ್ಲಿ ತೊಡಗಿಸಿಕೊಂಡಿದ್ದರೆ ಅತ್ತ 40-50 ಶಸ್ತ್ರಸಜ್ಜಿತರ ಇನ್ನೊಂದು ಗುಂಪು ವಸತಿ ಪ್ರದೇಶಗಳಲ್ಲಿ ಹಿಂಸಾಚಾರವನ್ನು ನಡೆಸಬೇಕು ಎನ್ನುವುದು ಹತ ಉಗ್ರರ ಯೋಜನೆಯಾಗಿತ್ತು ಎನ್ನಲಾಗಿದೆ.
ಆದರೆ CRPF ಶಿಬಿರವನ್ನು ಗುರಿಯಾಗಿಸಿಕೊಳ್ಳುವಾಗ ಹೊರಗಡೆ ನಿಲ್ಲಿಸಿದ್ದ CRPFನ ಗುಂಡು ನಿರೋಧಕ ವಾಹನವನ್ನು ಅವರು ಗಮನಿಸಿರಲಿಲ್ಲ. ಈ ವಾಹನದ ಮೇಲೆ ಲೈಟ್ ಮಷಿನ್ಗನ್ ಅಳವಡಿಸಲಾಗಿತ್ತು ಎಂದು ಅನಾಮಿಕ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ವಾಹನದಲ್ಲಿದ್ದ ಸಿಬ್ಬಂದಿಗಳು ತಕ್ಷಣವೇ ಮಷಿನ್ ಗನ್ನಿಂದ ಗುಂಡುಗಳನ್ನು ಹಾರಿಸಿದ್ದು, ಮೊದಲ ಸುತ್ತಿನಲ್ಲೇ ಹೆಚ್ಚಿನ ಉಗ್ರರು ಕೊಲ್ಲಲ್ಪಟ್ಟಿದ್ದರು. ಸುಮಾರು 30 ನಿಮಿಷಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಓರ್ವ CRPF ಸಿಬ್ಬಂದಿ ಮಾತ್ರ ಗಾಯಗೊಂಡಿದ್ದರು.
ಕುಕಿ-ರೆ ಉಪಪಂಗಡವಾದ ಹಮರ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ನೆರೆಯ ಫೆರ್ಜಾವಲ್ ಜಿಲ್ಲೆಯ ಗುಡ್ಡಗಳ ಬಳಿ ಈ ಘಟನೆ ನಡೆದಿತ್ತು. ಎಲ್ಲ ಉಗ್ರರು ಹಮರ್ ಸಮುದಾಯಕ್ಕೆ ಸೇರಿದವರಾಗಿದ್ದರು. ಮೃತರು ಗ್ರಾಮ ಸ್ವಯಂಸೇವಕರಾಗಿದ್ದರು ಮತ್ತು ಅವರ ಹತ್ಯೆಗಳು CRPF ಮತ್ತು ಮೈಥೇಯಿಗಳು ನಡೆಸಿದ ಪೂರ್ವ ನಿಯೋಜಿತ ನರಮೇಧವಾಗಿದೆ ಎಂದು ಹಮರ್ ವಿದ್ಯಾರ್ಥಿ ಸಂಘವು ಆರೋಪಿಸಿತ್ತು.
ಈ ಆರೋಪಗಳನ್ನು ತಿರಸ್ಕರಿಸಿರುವ ಭದ್ರತಾ ಅಧಿಕಾರಿಗಳು, ಮೃತ 10 ಉಗ್ರರ ಪೈಕಿ ಒಂಭತ್ತು ಜನರು 200 ಕಿ.ಮೀ.ದೂರದ ಚುರಾಚಂದಪುರದವರಾಗಿದ್ದರು ಎಂದು ಹೇಳಿದ್ದಾರೆ. ಪೋಲೀಸರು ಮೃತರ ಬಳಿಯಿಂದ ಎಕೆ 47 ರೈಫಲ್ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.