ಮಣಿಪುರ: ನಾಪತ್ತೆಯಾಗಿದ್ದಾರೆ ಎಂದು ಹೇಳಲಾದ ಮಹಿಳೆಯ ಮೃತದೇಹ ಪತ್ತೆ
video Screengrab photo | youtube
ಇಂಫಾಲ : ಮಣಿಪುರದ ಜಿರಿಬಾಮ್ ಜಿಲ್ಲೆಯಿಂದ ನವೆಂಬರ್ 11ರಂದು ನಾಪತ್ತೆಯಾಗಿದ್ದ 6 ಮಂದಿ ಮೈತೈಗಳಲ್ಲಿ ಓರ್ವ ಮಹಿಳೆಯದ್ದೆಂದು ಹೇಳಲಾದ ಮೃತದೇಹ ಅಸ್ಸಾಂನ ಕಚಾರ್ ಜಿಲ್ಲೆಯ ಬರಾಕ್ ನದಿಯಲ್ಲಿ ತೇಲುತ್ತಿರುವುದು ರವಿವಾರ ಕಂಡು ಬಂದಿದೆ.
ವಯಸ್ಸಾದ ಮಹಿಳೆಯ ಮೃತದೇಹ ಲಖಿಪುರ ಉಪ ವಿಭಾಗದ ಬರಾಕ್ ನದಿಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಮೃತದೇಹ ತೇಲುತ್ತಿರುವುದನ್ನು ಕಚಾರ್ ಪೊಲೀಸರು ಇಂದು ಬೆಳಗ್ಗೆ ಪತ್ತೆ ಹಚ್ಚಿದರು ಎಂದು ಜಿರಿಬಾಮ್ ಮೂಲದ ಅಸ್ಸಾಂ ರೈಫಲ್ಸ್ನ ಅಧಿಕಾರಿ ದೃಢಪಡಿಸಿದ್ದಾರೆ.
ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿರುವ ಕೆಲವು ಅಂಗಡಿಗಳಿಗೆ ಶಂಕಿತ ಕುಕಿ ಉಗ್ರರು ನವೆಂಬರ್ 11ರಂದು ಬೆಂಕಿ ಹಚ್ಚಿದ ಸಂದರ್ಭ ಸಂಭವಿಸಿದ ಹಿಂಸಾಚಾರದ ಬಳಿಕ ಜಿರಿಬಾಮ್ನಿಂದ ನಾಪತ್ತೆಯಾದ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳ ಗುಂಪಿನಲ್ಲಿ ಈ ಮಹಿಳೆ ಸೇರಿರುವ ಸಾಧ್ಯತೆ ಇದೆ ಎಂದು ಮಣಿಪುರ ಪೊಲೀಸ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮಹಿಳೆಯ ಮೃತದೇಹದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ ಗುಂಪೊಂದು ಜಿರಿಬಾಮ್ ನ ಕಲಿನಗರ್ ನ ಹಮಾರ್ ಗ್ರಾಮಕ್ಕೆ ನುಗ್ಗಿ 8 ಪರಿತ್ಯಕ್ತ ಮನೆಗಳಿಗೆ ಬೆಂಕಿ ಹಚ್ಚಿತು ಎಂದು ಭದ್ರತಾ ಪಡೆ ತಿಳಿಸಿದೆ.
ನಾಪತ್ತೆಯಾದ ಗುಂಪಿನಲ್ಲಿದ್ದವರೆಂದು ಹೇಳಲಾದ ಓರ್ವ ಮಹಿಳೆ ಹಾಗೂ ಇಬ್ಬರ ಮಕ್ಕಳ ಮೃತದೇಹ ಬರಾಕ್ ನದಿಯಲ್ಲಿ ಶುಕ್ರವಾರ ಸಂಜೆ ಕಂಡು ಬಂದಿತ್ತು. ಗುಂಪಿನ ಓರ್ವ ಮಹಿಳೆ ಹಾಗೂ ಮಗು ಇನ್ನೂ ಪತ್ತೆಯಾಗಿಲ್ಲ.
ಶುಕ್ರವಾರ ಸಂಜೆ ಮೂವರ ಮೃತದೇಹಗಳು ಪತ್ತೆಯಾದ ಬಳಿಕ ಮಣಿಪುರ ಸರಕಾರ ರಾತ್ರಿ ಸುಮಾರು 10 ಗಂಟೆಗೆ ಸಂಪುಟ ಸಭೆ ನಡೆಸಿತು. ಅಲ್ಲದೆ, ಜಿರಿಬಾಮ್ನಲ್ಲಿ ನವೆಂಬರ್ 11ರಂದು ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳನ್ನು ಕಾನೂನು ಬಾಹಿರ ಎಂದು ಘೋಷಿಸಲು ನಿರ್ಧಾರ ತೆಗೆದುಕೊಂಡಿತು.