ಮಣಿಪುರ: ಇಂಡಿಯಾ ಟುಡೆ ಸಮೂಹದ ಪ್ರಶಸ್ತಿ ನಿರಾಕರಿಸಿದ ಆದಿವಾಸಿ ಪತ್ರಕರ್ತೆ
ಜಸಿಂತಾ ಕೆರ್ಕೆಟ್ಟಾ | Photo: eastmojo.com
ಇಂಫಾಲ: ಆದಿವಾಸಿ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ತೀಕ್ಷ್ಣ ಬರಹಗಳನ್ನು ಬರೆದಿರುವ ಕಾರಣಕ್ಕೆ ಜನಪ್ರಿಯರಾಗಿರುವ ಖ್ಯಾತ ಕವಿಯತ್ರಿ ಹಾಗೂ ಪತ್ರಕರ್ತೆ ಜಸಿಂತಾ ಕೆರ್ಕೆಟ್ಟಾ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದು, ನವೆಂಬರ್ 21, 2023ರಂದು ಇಂಡಿಯಾ ಟುಡೇ ಸಮೂಹವು ಘೋಷಿಸಿದ್ದ ‘ಆಜ್ ತಕ್ ಸಾಹಿತ್ಯ ಜಾಗೃತಿ ಉದ್ಯಮನ್ ಪ್ರತಿಭಾ ಸಮ್ಮಾನ್’ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಈ ಪ್ರಶಸ್ತಿಯನ್ನು ಅವರ ಕಾವ್ಯ ಕೃಷಿಯನ್ನು ಗುರುತಿಸಿ ಘೋಷಿಸಲಾಗಿದ್ದು, ಪ್ರಶಸ್ತಿಯು ರೂ. 50,000 ನಗದನ್ನು ಒಳಗೊಂಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 26ರಂದು ದಿಲ್ಲಿಯಲ್ಲಿ ನಿಗದಿಯಾಗಿತ್ತು. ಆದರೆ, ಈ ಪ್ರಶಸ್ತಿಯನ್ನು ನಿರಾಕರಿಸಲು ಕೆರ್ಕೆಟ್ಟಾ ನಿರ್ಧರಿಸಿದ್ದಾರೆ ಎಂದು eastmojo.com ವರದಿ ಮಾಡಿದೆ.
ಈ ಕುರಿತು EastMojo ಸುದ್ದಿ ಸಂಸ್ಥೆಗೆ ಸಂದೇಶ ರವಾನಿಸಿರುವ ಕೆರ್ಕೆಟ್ಟಾ, “ನನಗೆ ಈ ಪ್ರಶಸ್ತಿಯ ಸುದ್ದಿಯಿಂದ ರೋಮಾಂಚನವಾಗಲಿ ಅಥವಾ ಸಂತೋಷವಾಗಲಿ ಆಗಿಲ್ಲ. ಯಾಕೆಂದರೆ, ಹಲವಾರು ಜನರ ಜೀವನಗಳಿಂದ ಗೌರವ ಎಂಬುದು ಕಣ್ಮರೆಯಾಗಿದೆ” ಎಂದು ಹೇಳಿದ್ದು, ಮಣಿಪುರದಲ್ಲಿನ ಆದಿವಾಸಿಗಳು, ಕೇಂದ್ರ ಭಾರತ ಹಾಗೂ ಜಾಗತಿಕ ಸಮುದಾಯವು ಯಾವುದೇ ಅರ್ಹ ಗೌರವವಿಲ್ಲದೆ ಜೀವಿಸುತ್ತಿದ್ದು, ಅವರ ವಿರುದ್ಧ ನಡೆದಿರುವ ದೌರ್ಜನ್ಯಗಳನ್ನು ಗುರುತಿಸಿಯೂ ಇಲ್ಲದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. “ನನ್ನ ಹೃದಯವು ಕಲಕಿದೆ. ಇದು ಪ್ರತಿಷ್ಠಿತ ಗೌರವವಾಗಿದ್ದರೂ, ನಾನದನ್ನು ಸ್ವೀಕರಿಸುತ್ತಿಲ್ಲ” ಎಂದು ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಣಿಪುರದಲ್ಲಿನ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿರುವ ಕೆರ್ಕೆಟ್ಟಾ, “ಮಣಿಪುರದಲ್ಲಿನ ಆದಿವಾಸಿಗಳು ತಮ್ಮ ಜೀವನದ ಗೌರವವನ್ನು ಕಳೆದುಕೊಳ್ಳುವಾಗ, ಅವರ ಕುರಿತು ಮುಖ್ಯವಾಹಿನಿಯ ಮಾಧ್ಯಮಗಳು ವಿಭಿನ್ನ ನಿಲುವು ತಳೆದವು. ಅವರ ಬಿಕ್ಕಟ್ಟಿನೊಂದಿಗೆ ನಿಲ್ಲುವುದು ಮಾತ್ರ ಗೌರವದ ಭಾವನೆಯನ್ನು ತರಲಿದೆ” ಎಂದು ಹೇಳಿದ್ದಾರೆ.
ಜಾರ್ಖಂಡ್ ನ ಸಿಂಗ್ ಭೂಮ್ ಜಿಲ್ಲೆಯ ಒರಾವನ್ ಆದಿವಾಸಿ ಸಮುದಾಯದ ಸದಸ್ಯೆಯಾಗಿರುವ ಜಸಿಂತಾ ಕೆರ್ಕೆಟ್ಟಾ, ಕವಿಯತ್ರಿ, ಬರಹಗಾರ್ತಿ ಹಾಗೂ ಹವ್ಯಾಸಿ ಪತ್ರಕರ್ತೆಯಾಗಿದ್ದಾರೆ. ಅವರ ‘ಅಂಗೋರ್’ (2016) ಹಾಗೂ ‘ಜಡೋಂ ಕಿ ಝಮೀನ್ʼ(2018) ಕವನ ಸಂಕಲನಗಳು ಆದಿವಾಸಿ ಸಮುದಾಯಗಳು ಎದುರಿಸುತ್ತಿರುವ ಅನ್ಯಾಯದ ಮೇಲೆ ಬೆಳಕು ಚೆಲ್ಲುತ್ತವೆ. ಗಮನಾರ್ಹ ಸಂಗತಿಯೆಂದರೆ, ಅವರ ಕೃತಿಗಳು ಭಾಷೆಯ ಎಲ್ಲೆಗಳನ್ನು ದಾಟಿ ಹರಡಿದ್ದು, ಜರ್ಮನ್, ಇಟಲಿ ಹಾಗೂ ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡಿವೆ.