ಮಣಿಪುರದಲ್ಲಿ ಶಾಶ್ವತ ಶಾಂತಿ ಮರುಸ್ಥಾಪನೆಗಾಗಿ ಮೈತೈ, ಕುಕಿ ಸಮುದಾಯಗಳೊಂದಿಗೆ ಸರಕಾರ ಮಾತುಕತೆ ನಡೆಸುತ್ತಿದೆ: ಅಮಿತ್ ಶಾ
ಅಮಿತ್ ಶಾ | PC : PTI
ಹೊಸ ದಿಲ್ಲಿ: ಮಣಿಪುರದಲ್ಲಿ ಶಾಶ್ವಾತ ಶಾಂತಿ ನೆಲೆಸುವಂತೆ ಮಾಡಲು ಸರಕಾರವು ಮೈತೈ ಮತ್ತು ಕುಕಿ ಸಮುದಾಯದೊಂದಿಗೆ ಮಾತುಕತೆ ನಡೆಸುತ್ತಿದೆ. ಇದರೊಂದಿಗೆ ಗಡಿ ನುಸುಳುವಿಕೆಯನ್ನು ತಡೆಗಟ್ಟಲು ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮೋದಿ ಸರಕಾರದ ಮೂರನೆ ಅವಧಿಯ 100 ದಿನಗಳಲ್ಲಿ ಆಗಿರುವ ಸಾಧನೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅಮಿತ್ ಶಾ, ಕಳೆದ ವಾರದಲ್ಲಿನ ಮೂರು ದಿನಗಳ ಹಿಂಸಾಚಾರವನ್ನು ಹೊರತುಪಡಿಸಿದರೆ ಮಣಿಪುರದ ಸ್ಥಿತಿ ಬಹುತೇಕ ಶಾಂತಿಯುತವಾಗಿದೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಸರಕಾರವು ಕೆಲಸ ಮಾಡುತ್ತಿದೆ ಎಂದು ಹೇಳಿದರು.
“ಶಾಂತಿ ಪಾಲನೆಗಾಗಿ ನಾವು ಎರಡೂ ಸಮುದಾಯಗಳ ನಡುವೆ ಮಾತುಕತೆ ನಡೆಸುತ್ತಿದ್ದೇವೆ. ಮಣಿಪುರದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ನಾವು ನೀಲನಕ್ಷೆಯೊಂದನ್ನು ತಯಾರಿಸುತ್ತಿದ್ದೇವೆ” ಎಂದು ಅವರು ತಿಳಿಸಿದರು.
ಮ್ಯಾನ್ಮಾರ್ ನೊಂದಿಗಿನ 30 ಕಿಮೀ ಅಂತಾರಾಷ್ಟ್ರೀಯ ಗಡಿಯಲ್ಲಿ ಬೇಲಿ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, 1500 ಕಿಮೀ ಗಡಿಯುದ್ದಕ್ಕೂ ಬೇಲಿ ನಿರ್ಮಾಣಕ್ಕೆ ನಿಧಿ ಒದಗಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ” ಎಂದೂ ಅವರು ಹೇಳಿದರು.