ನಮ್ಮ ನೆಲಕ್ಕೆ ಬೆದರಿಕೆ ಇದೆ: ಮಣಿಪುರದ ಮಾಜಿ ಸಿಎಂ ಬಿರೇನ್ ಸಿಂಗ್

ಬಿರೇನ್ ಸಿಂಗ್ (Photo: PTI)
ಗುವಾಹಟಿ: ನಮ್ಮ ಭೂಮಿ ಹಾಗೂ ಗುರುತಿಗೆ ಬೆದರಿಕೆ ಇದೆ. ಆದುದರಿಂದ ಎಚ್ಚರಿಕೆಯಿಂದ ಇರುವಂತೆ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮಣಿಪುರದ ಸ್ಥಳೀಯ ಸಮುದಾಯವನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯ ಸುದ್ದಿ ಹೊರಬೀಳುತ್ತಿದ್ದಂತೆ ಸಿಂಗ್ ಅವರು ತನ್ನ ‘ಎಕ್ಸ್’ನಲ್ಲಿ ಗುರುವಾರ ಸಂಜೆ ಸುದೀರ್ಘ ಹೇಳಿಕೆಯನ್ನು ನೀಡಿದ್ದಾರೆ.
‘‘ನನ್ನ ಪ್ರೀತಿಯ ಸ್ಥಳೀಯ ಗೆಳೆಯರೇ, ನಮ್ಮ ಭೂಮಿ ಹಾಗೂ ಗುರುತು ಅಪಾಯದಲ್ಲಿದೆ. ಕಡಿಮೆ ಜನಸಂಖ್ಯೆ ಹಾಗೂ ಸೀಮಿತ ಸಂಪನ್ಮೂಲದಿಂದ ನಾವು ದುರ್ಬಲರಾಗಿದ್ದೇವೆ. ನಾನು 2023 ಮೇ 2 ವರೆಗೆ ಅಕ್ರಮ ವಲಸೆಯ ಕುರಿತು ಅವಿಶ್ರಾಂತವಾಗಿ ನಿಗಾ ವಹಿಸಿದ್ದೇನೆ ಹಾಗೂ ಪತ್ತೆ ಹಚ್ಚಿದ್ದೇನೆ. ಆದರೆ, 2023 ಮೇ 3ರ ದುರಂತ ಘಟನೆಯ ಬಳಿಕ ನಮ್ಮ ರಾಜ್ಯಾಡಳಿತ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಹೋರಾಡಿದೆೆ’’ ಎಂದು ಅವರು ಬರೆದಿದ್ದಾರೆ.
ಅವರು ಮ್ಯಾನ್ಮಾರ್ನೊಂದಿಗಿನ ಮಣಿಪುರದ 398 ಕಿ.ಮೀ. ಗಡಿಯನ್ನು ಕಾವಲು ರಹಿತ ಎಂದು ಗಮನ ಸೆಳೆದರು. ಅಲ್ಲದೆ, ಮುಕ್ತ ಸಂಚಾರ ವ್ಯವಸ್ಥೆಯು ರಾಜ್ಯದ ಜನಸಂಖ್ಯೆಯನ್ನು ಆಗಾಗ ಬದಲಾಯಿಸುತ್ತಿದೆ ಎಂದು ಹೇಳಿದರು.
‘‘ಇದು ವದಂತಿ ಅಲ್ಲ. ಇದು ನಮ್ಮ ಕಣ್ಣ ಮುಂದೆ ನಡೆಯುತ್ತಿರುವುದು. ನಮ್ಮ ಸರಕಾರ 2017 ಮಾರ್ಚ್ನಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಸವಾಲು ತೀವ್ರಗೊಂಡಿದೆ. 2023 ಮೇ 3ರ ಬಳಿಕ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ’’ ಅವರು ಹೇಳಿದ್ದಾರೆ.
ಅಕ್ರಮ ವಲಸೆ ಹೆಚ್ಚುತ್ತಿರುವ ಕುರಿತು ಅವರು ಎಚ್ಚರಿಸಿದರು ಹಾಗೂ ಇದು ಸಮಾಜಕ್ಕೆ ಗಂಭೀರ ಬೆದರಿಕೆ ಎಂದು ಹೇಳಿದರು.
‘‘ಇದುವರೆಗೆ, ನಾವು ಕೇವಲ ನಮ್ಮ ಭೂಭಾಗದ ಒಳಗೆ ಪ್ರವೇಶಿಸಿದ ಜನರ ಸಣ್ಣ ಸಂಖ್ಯೆಯನ್ನು ಮಾತ್ರ ಗುರುತಿಸಿದ್ದೇವೆ. ಆದರೆ, ಇಂದಿಗೂ ಪತ್ತೆಯಾಗದವರ ಕುರಿತು ಏನು ಹೇಳುವುದು?’’ ಎಂದು ಅವರು ಪ್ರಶ್ನಿಸಿದ್ದಾರೆ.