ಮಣಿಪುರ: ಪೊಲೀಸರು, ಪ್ರತಿಭಟನಕಾರರ ನಡುವೆ ಘರ್ಷಣೆ; ಹಲವರಿಗೆ ಗಾಯ
Photo: NDTV
ಇಂಫಾಲ: ಇಂಫಾಲ ಸೇರಿದಂತೆ ಮಣಿಪುರದ ಹಲವು ಪ್ರದೇಶಗಳಲ್ಲಿ ಗುರುವಾರ ಪ್ರತಿಭಟನೆ ಸಂದರ್ಭ ಪ್ರತಿಭಟನೆಕಾರರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಭದ್ರತಾ ಪಡೆಗಳ ಸಮವಸ್ತ್ರ ಧರಿಸಿದ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದ ಆರೋಪದಲ್ಲಿ ಐವರು ವ್ಯಕ್ತಿಗಳನ್ನು ಸೆಪ್ಟಂಬರ್ 16ರಂದು ಭದ್ರತಾ ಪಡೆ ಬಂಧಿಸಿತ್ತು. ಇದು ಮಣಿಪುರದಲ್ಲಿ ವ್ಯಾಪಕ ಪ್ರತಿಭಟನೆ ಹಾಗೂ ಧರಣಿಗೆ ಕಾರಣವಾಗಿದೆ. ಬಂಧಿತ ವ್ಯಕ್ತಿಗಳನ್ನು ನಿಶ್ಯರ್ತವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಮಂಗಳವಾರ 48 ಗಂಟೆಗಳ ಬಂದ್ ಗೆ ಕರೆ ನೀಡಿದ್ದರು.
ಬಂಧಿತರನ್ನು ನಿಶ್ಯರ್ತವಾಗಿ ಬಿಡುಗಡೆ ಮಾಡುವಂತೆ ಇಂದು ಅಪರಾಹ್ನ ಐದು ಜಿಲ್ಲೆಗಳಲ್ಲಿ ಮಹಿಳಾ ಪ್ರತಿಭಟನಕಾರರು ಪೊಲೀಸ್ ಠಾಣೆಗೆ ರ್ಯಾಲಿ ನಡೆಸಿದರು. ಬೇಡಿಕೆ ಈಡೇರಿಸದೇ ಇದ್ದರೆ, ತಮ್ಮನ್ನು ಕೂಡ ಬಂಧಿಸಿ ಎಂದು ಅವರು ಆಗ್ರಹಿಸಿದರು. ಹಲವು ಸ್ಥಳಗಲ್ಲಿ ಆಕ್ರೋಶಿತ ಪ್ರತಿಭಟನಕಾರರು ಹಾಗೂ ಪೊಲೀಸರು, ಇತರ ಸಿಬ್ಬಂದಿ ಮುಖಾಮುಖಿಯಾಗಿ ಘರ್ಷಣೆಗೆ ಇಳಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಂತಿಮವಾಗಿ ಅಶ್ರುವಾಯು ಸೆಲ್ ಗಳನ್ನು ಪ್ರಯೋಗಿಸಿದರು ಮತ್ತು ಲಾಠಿ ಪ್ರಹಾರ ನಡೆಸಿದರು. ಈ ಘಟನೆಯಲ್ಲಿ ಹಲವರು ಗಾಯಗೊಂಡರು. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕರ್ಫ್ಯೂ ಸಡಿಲಿಕೆಯನ್ನು ಹಿಂಪಡೆದಿದೆ ಹಾಗೂ ನಿಷೇಧಾಜ್ಞೆಯನ್ನು ಮರು ಜಾರಿಗೊಳಿಸಿದೆ.