ಗಸಗಸೆ ಬೆಳೆಯುವವರ ವಿರುದ್ಧ ಕ್ರಮ : ಮಣಿಪುರ ಸಿಎಂ ಭರವಸೆ
ಎನ್.ಬಿರೇನ್ ಸಿಂಗ್ | PTI
ಇಂಫಾಲ : ನಾಗಾ ಗ್ರಾಮ ಪ್ರಾಧಿಕಾರವು ಮಣಿಪುರ ಸರಕಾರಕ್ಕೆ ಗಡುವು ನೀಡಿರುವ ಬೆನ್ನಿಗೇ, ಗಸಗಸೆ ಬೆಳೆಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರವಿವಾರ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿನ ಗಸಗಸೆ ಬೆಳೆಯನ್ನು ನಾಶ ಮಾಡಲು ಹೋದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗ್ರಾಮ ಸ್ವಯಂಸೇವಕರ ನೇತೃತ್ವದ ಪೊಲೀಸ್ ತಂಡವೊಂದರ ಮೇಲೆ ಸಶಸ್ತ್ರ ಗಸಗಸೆ ಬೆಳೆಗಾರರು ದಾಳಿ ನಡೆಸಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿರೇನ್ ಸಿಂಗ್ ರಿಂದ ಈ ಭರವಸೆ ಹೊರ ಬಿದ್ದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿರೇನ್ ಸಿಂಗ್, “ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿನ ಗಸಗಸೆ ಬೆಳೆಯ ವಿರುದ್ಧ ಬಲವಾದ ನಿಲುವು ತೆಗೆದುಕೊಂಡಿರುವ ಮಖಾನ್ ಗ್ರಾಮ ಪ್ರಾಧಿಕಾರವನ್ನು ನಾನು ಅಭಿನಂದಿಸುತ್ತೇನೆ. ಕೇಂದ್ರ ಭದ್ರತಾ ಪಡೆಗಳು ಹಾಗೂ ರಾಜ್ಯ ಪೊಲೀಸರು ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿದ್ದು, ಗಸಗಸೆ ಬೆಳೆ ಹಾಗೂ ಅದಕ್ಕೆ ಸಂಬಂಧಿಸಿದ ಬೆಳೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಿದ್ದಾರೆ ಎಂದು ನಿಮಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ. ಇದರೊಂದಿಗೆ, ಮಣಿಪುರದಿಂದ ಮಾದಕ ದ್ರವ್ಯವನ್ನು ನಿರ್ಮೂಲನೆ ಮಾಡಲು ಎಲ್ಲರೂ ಮುಂದೆ ಬರಬೇಕು ಹಾಗೂ ಈ ಹೋರಾಟದೊಂದಿಗೆ ಕೈಜೋಡಿಸಬೇಕು ಎಂದೂ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಶನಿವಾರ ಮಣಿಪುರ ಸರಕಾರಕ್ಕೆ ಗಡುವು ನೀಡಿದ್ದ ಮಖಾನ್ ಗ್ರಾಮ ಪ್ರಾಧಿಕಾರವು, ಇನ್ನು ನಾಲ್ಕು ದಿನಗಳೊಳಗಾಗಿ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿನ ಗಸಗಸೆ ಬೆಳೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.