ಮಣಿಪುರ ಜನಾಂಗೀಯ ಹಿಂಸಾಚಾರ, ಕುಟುಂಬಸ್ಥರಿಗೆ 64 ಮೃತದೇಹಗಳ ಹಸ್ತಾಂತರ
Photo; ANI
ಇಂಫಾಲ: ಮಣಿಪುರದಲ್ಲಿ ಮೇಯಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಶವಾಗಾರಗಳಲ್ಲಿ ಇರಿಸಲಾಗಿದ್ದ ಕುಕಿ ಹಾಗೂ ಮೈತೈ ಸಮುದಾಯಗಳಿಗೆ ಸೇರಿದ ಒಟ್ಟು 64 ಸಂತ್ರಸ್ತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇಲ್ಲಿನ ಜೆಎನ್ಐಎಂಎಸ್ ಹಾಗೂ ಆರ್ಐಎಂಎಸ್ ಆಸ್ಪತ್ರೆಗಳಲ್ಲಿ ಇರಿಸಲಾಗಿದ್ದ ಕುಕಿ ಸಮುದಾಯಕ್ಕೆ ಸೇರಿದ 60 ಸಂತ್ರಸ್ತರ ಮೃತದೇಹಗಳನ್ನು ಏರ್ ಲಿಫ್ಟ್ ಮಾಡಲಾಯಿತು. ಈ ಸಂದರ್ಭ ಮಣಿಪುರ ಪೊಲೀಸ್ ಹಾಗೂ ಸೇನೆಯ ಅಸ್ಸಾಂ ರೈಫಲ್ಸ್ ಘಟಕ ಬಿಗಿ ಭದ್ರತೆ ನೀಡಿತ್ತು.
ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯಾಗಿರುವ ಚುರಾಚಂದಪುರದ ಶವಾಗಾರದಲ್ಲಿ ಇರಿಸಲಾಗಿದ್ದ ಮೈತೈ ಸಮುದಾಯದ ನಾಲ್ವರು ಸಂತ್ರಸ್ತರ ಮೃತದೇಹವನ್ನು ಕೂಡ ಇಂಫಾಲಕ್ಕೆ ತರಲಾಗಿದೆ ಹಾಗೂ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ತನಿಖೆ, ಪರಿಹಾರ ಕ್ರಮಗಳು ಹಾಗೂ ಪುನರ್ವಸತಿಯನ್ನು ಪರಿಶೀಲಿಸಲು ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳಾದ ಗೀತಾ ಮಿತ್ತೆಲ್, ಶಾಲಿನಿ ಜೋಷಿ ಹಾಗೂ ಆಶಾ ಮೆನನ್ ಅವರನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ ನಲ್ಲಿ ರೂಪಿಸಿತ್ತು.