ಮಣಿಪುರ: ಐದು ಜಿಲ್ಲೆಗಳಲ್ಲಿ ಸಂಪೂರ್ಣ ಕರ್ಫ್ಯೂ ಮರು ಜಾರಿ
ಸಾಂದರ್ಭಿಕ ಚಿತ್ರ.| Photo: PTI
ಇಂಫಾಲ: ಮೈತೈ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪುರ ಆಡಳಿತ ಮಂಗಳವಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಸಂಪೂರ್ಣ ಕರ್ಫ್ಯೂ ಮರು ಹೇರಿದೆ. ಈ ಕರ್ಫ್ಯೂನಿಂದ ಅತ್ಯಗತ್ಯದ ಸೇವೆಗಳನ್ನು ಹೊರತುಪಡಿಸಲಾಗಿದೆ.
ಬಿಷ್ಣುಪುರ, ಕಕ್ಚಿಂಗ್, ಥೌಬಾಲ್, ಇಂಫಾಲ್ ಪಶ್ಚಿಮ ಹಾಗೂ ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯ ಸಮಯವನ್ನು ರದ್ದುಪಡಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಮಂಗಳವಾರದ ವರೆಗೆ ಪ್ರತಿ ದಿನ ಬೆಳಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು.
ಮೈತೈಗಳನ್ನು ಪ್ರತಿನಿಧಿಸುವ 6 ಗುಂಪುಗಳ ಮಾತೃಸಂಸ್ಥೆ ಕೋ-ಆರ್ಡಿನೇಶನ್ ಕಮಿಟಿ ಆನ್ ಮಣಿಪುರ ಇಂಟಗ್ರೆಟಿ ಹಾಗೂ ಅದರ ಮಹಿಳಾ ಘಟಕ ಬಿಷ್ಣುಪುರದ ಫೌಗಾಕ್ಚೊ ಇಖಾಯಿಯಲ್ಲಿ ಅಳವಡಿಸಲಾಗಿರುವ ಸೇನಾ ಬ್ಯಾರಿಕೇಡ್ಗಳನ್ನು ತೆರವುಗೊಳಿಸುವಂತೆ ಮಣಿಪುರದ ಜಿಲ್ಲೆಗಳ ಜನರನ್ನು ಆಗ್ರಹಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಮಣಿಪುರದಲ್ಲಿ ಮೇ 3ರಂದು ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಘರ್ಷಣೆ ಭುಗಿಲೆದ್ದ ಬಳಿಕ 195ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 60 ಸಾವಿರ ವ್ಯಕ್ತಿಗಳು ತಮ್ಮ ಮನೆಗಳನ್ನು ತ್ಯಜಿಸಿ ಓಡಿ ಹೋಗಿದ್ದಾರೆ. ಕೇಂದ್ರ ಭದ್ರತಾ ಪಡೆಯ ಉಪಸ್ಥಿತಿಯಲ್ಲೂ ಅತ್ಯಾಚಾರ, ಹತ್ಯೆ, ಪೊಲೀಸ್ ಶಸ್ತ್ರಾಗಾರಗಳಿಂದ ಆಯುಧಗಳ ಲೂಟಿ ಹಾಗೂ ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ.