ಮಣಿಪುರ: ಗುಂಡಿನ ಕಾಳಗ, ಗ್ರಾಮ ಸ್ವಯಂ ಸೇವಕ ಸಾವು
ಸಾಂದರ್ಭಿಕ ಚಿತ್ರ | Photo: ANI
ಇಂಫಾಲ: ಮಣಿಪುರದ ಕಂಗ್ಪೊಕ್ಪಿ ಜಿಲ್ಲೆಯಲ್ಲಿ ಶನಿವಾರ ಅಪರಿಚಿತ ವ್ಯಕ್ತಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಓರ್ವ ಗ್ರಾಮ ಸ್ವಯಂಸೇವಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೌಪಿ ಗ್ರಾಮದಲ್ಲಿ ಶಸಸ್ತ್ರ ವ್ಯಕ್ತಿಗಳ ಗುಂಪೊಂದು ಮುಂಜಾನೆ 2.30ಕ್ಕೆ ದಾಳಿ ನಡೆಸಿತು. ಇದರಿಂದ ಗ್ರಾಮ ಸ್ವಯಂ ಸೇವಕರು ಹಾಗೂ ದಾಳಿಕೋರರು ನಡುವೆ ಗುಂಡಿನ ಕಾಳಗ ನಡೆಯಿತು ಎಂದು ಅವರು ತಿಳಿಸಿದ್ದಾರೆ.
‘‘ಗುಂಡಿನ ಕಾಳಗದಲ್ಲಿ ಮೃತಪಟ್ಟ ಗ್ರಾಮ ಸ್ವಯಂ ಸೇವಕನನ್ನು ಖುಪ್ನಿನ್ಥಂಗ್ ಎಂದು ಗುರುತಿಸಲಾಗಿದೆ. ದಾಳಿ ನಡೆಸಿದ ಬಳಿಕ ಈ ಶಸಸ್ತ್ರ ವ್ಯಕ್ತಿಗಳ ಗುಂಪು ಪರಾರಿಯಾಯಿತು’’ ಎಂದು ಅವರು ಹೇಳಿದ್ದಾರೆ.
ಸಮೀಪದ ಇಂಫಾಲ ಕಣಿವೆಯ ಗ್ರಾಮಗಳ ಮೇಲೆ ಪ್ರತಿ ದಾಳಿ ಹಾಗೂ ಮತ್ತಷ್ಟು ಸೇಡಿನ ದಾಳಿ ನಡೆಯಬಹುದೆಂದು ಜನರು ಭೀತಿಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಗ್ರಾಮ ಹಾಗೂ ಬಿಷ್ಣುಪುರ, ಕಂಗ್ಪೊಕ್ಪಿ ಜಿಲ್ಲೆಗಳ ಸಮೀಪದ ಪ್ರದೇಶಗಳಲ್ಲಿ ಉದ್ವಿಗ್ನತೆ ನೆಲೆಸಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮದಲ್ಲಿ ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ದಾಳಿಕೋರರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಗ್ಪೊಕ್ಪಿ ಜಿಲ್ಲೆಯ ಹರಾವೊಥೆಲ್ ಗ್ರಾಮದ ಸಮೀಪ ನಡೆದ ಹೊಂಚು ದಾಳಿಯಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್ಬಿ) ಸಿಬ್ಬಂದಿ ಸೇರಿದಂತೆ ಇಬ್ಬರು ಹತ್ಯೆಯಾದ ಐದು ದಿನಗಳ ಬಳಿಕ ಈ ದಾಳಿ ನಡೆದಿದೆ.