ಮಣಿಪುರ: ಹೈಕೋರ್ಟ್ ನಲ್ಲಿ ಕುಕಿ ಪ್ರಾಧ್ಯಾಪಕನನ್ನು ಪ್ರತಿನಿಧಿಸಿದ ಮೈತೈ ನ್ಯಾಯವಾದಿಯ ಮನೆ ಧ್ವಂಸ
Photo:scroll.in
ಇಂಫಾಲ್: ಪ್ರಕರಣವೊಂದಕ್ಕೆ ಸಂಬಂಧಿಸಿ ಉಚ್ಚ ನ್ಯಾಯಾಲಯದಲ್ಲಿ ಕುಕಿ-ಝೋ ಸಮುದಾಯಕ್ಕೆ ಸೇರಿದ ರಾಜಕೀಯ ಶಾಸ್ತ್ರಜ್ಞ ಖಾಮ್ ಖಾನ್ ಸುವಾನ್ ಹೇಸಿಂಗ್ ಅವರನ್ನು ಪ್ರತಿನಿಧಿಸಿದ್ದ ಮೈತೈ ಸಮುದಾಯಕ್ಕೆ ಸೇರಿದ ನ್ಯಾಯವಾದಿಯೊಬ್ಬರ ಮಣಿಪುರದಲ್ಲಿರುವ ಮನೆಯನ್ನು ಗುಂಪೊಂದು ಶುಕ್ರವಾರ ಧ್ವಂಸ ಮಾಡಿದೆ.
ಗುಂಪು ನ್ಯಾಯವಾದಿ ಸೊಯಿರೈಶಾಮ್ ಚಿತ್ತರಂಜನ್ ಅವರ ಮನೆಗೆ ಅಪರಾಹ್ನ 2 ಗಂಟೆಗೆ ನುಗ್ಗಿ ದಾಂಧಲೆ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆಗಮಿಸಿದ ಬಳಿಕ ಗುಂಪು ಚದುರಿತು. ದಾಳಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಚಿತ್ತರಂಜನ್, ಈ ಪ್ರಕರಣವನ್ನು ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್ ಅವರು ನಿರ್ವಹಿಸುತ್ತಿದ್ದಾರೆ.
ತನ್ನ ಪಾತ್ರ ಅತ್ಯಲ್ಪ. ತಾನು ಕೇವಲ ದಾಖಲೆಗಳನ್ನು ಮಾತ್ರ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ. ‘‘ನಿರ್ದಿಷ್ಟ ವೈಯುಕ್ತಿಕ ತೊಂದರೆ’’ಗಳನ್ನು ಉಲ್ಲೇಖಿಸಿ ಪ್ರಕರಣದಲ್ಲಿ ಹೇಸಿಂಗ್ ಅವರನ್ನು ಪ್ರತಿನಿಧಿಸುವುದರಿಂದ ಹಿಂದೆ ಸರಿಯುವುದಾಗಿ ಮಣಿಪುರ ಉಚ್ಚ ನ್ಯಾಯಾಲಯಕ್ಕೆ ನ್ಯಾಯವಾದಿಗಳಾದ ಚೋಂಗ್ತಮ್ ವಿಕ್ಟರ್ ಹಾಗೂ ಪ್ರಿಯೊಕುಮಾರ್ ಶರ್ಮಾ ಅವರೊಂದಿಗೆ ಚಿತ್ತರಂಜನ್ ಮನವಿ ಸಲ್ಲಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ನ್ಯಾಯಮೂರ್ತಿ ಎ. ಗುಣೇಶ್ವರ್ ಶರ್ಮಾ ಅವರು ಈ ಮನವಿಯನ್ನು ಸ್ವೀಕರಿಸಿದರು.
ಮಣಿಪುರದಲ್ಲಿ ಮೇ 3ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಕುಕಿಗಳ ಮೇಲೆ ಹಲವು ದಾಳಿಗಳನ್ನು ನಡೆಸಿರುವ ಆರೋಪಕ್ಕೆ ಒಳಗಾಗಿರುವ ತೀವ್ರವಾದಿ ಮೈತೈ ಗುಂಪು ‘ಅರಂಬಾಯಿ ತೆಂಗೋಲ್’ ಮೈತೈ ನ್ಯಾಯವಾದಿಗಳಿಗೆ ಬೆದರಿಕೆ ಒಡ್ಡಿದೆ. ಆದುದರಿಂದ ಅವರು ತನ್ನನ್ನು ಪ್ರತಿನಿಧಿಸುವುದರಿಂದ ಹಿಂದೆ ಸರಿದಿದ್ದಾರೆ ಎಂದು ಹೈದರಾಬಾದ್ ವಿ.ವಿ.ಯಲ್ಲಿ ರಾಜಕೀಯ ವಿಜ್ಞಾನ ಬೋಧಿಸುತ್ತಿರುವ ಖಾಮ್ ಖಾನ್ ಸುವಾನ್ ಹೇಸಿಂಗ್ ಹೇಳಿದ್ದಾರೆ.