ದಿಲ್ಲಿಯಲ್ಲಿ ಕುಕಿ, ಮೈತೈ ಹಾಗೂ ನಾಗಾ ಶಾಸಕರ ಸಭೆ ; ಬಿಜೆಪಿ ಸಂಸದ ಸಂಬಿತ್ ಪಾತ್ರ ಉಪಸ್ಥಿತಿ
PC : PTI
ಹೊಸದಿಲ್ಲಿ: ಮಂಗಳವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಣಿಪುರದ ಕುಕಿ ಮತ್ತು ಮೈತೈ ಸಮುದಾಯಗಳಿಗೆ ಸೇರಿದ ಸುಮಾರು 20 ಶಾಸಕರು ಸಭೆ ನಡೆಸಿದ್ದಾರೆ. ಕಳೆದ 17 ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಇದೇ ಪ್ರಥಮ ಬಾರಿಗೆ ಈ ಸಮುದಾಯಗಳ ಶಾಸಕರು ಒಟ್ಟಾಗಿ ಸಭೆ ನಡೆಸಿದ್ದಾರೆ.
ಮೈತೈ ಹಾಗೂ ಕುಕಿ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯವನ್ನು ಇಲ್ಲವಾಗಿಸಲು ಹಾಗೂ ಬಿಕ್ಕಟ್ಟಿಗೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳುವ ಭಾಗವಾಗಿ ಗೃಹ ವ್ಯವಹಾರಗಳ ಸಚಿವಾಲಯವು ಆಯೋಜಿಸಿದ್ದ ಈ ಸಭೆಯಲ್ಲಿ ಬಿಜೆಪಿ ಸಂಸದ ಸಂಬಿತ್ ಪಾತ್ರ ಹಾಗೂ ಮೂವರು ನಾಗಾ ಸಮುದಾಯದ ಶಾಸಕರೂ ಭಾಗವಹಿಸಿದ್ದರು.
ಈ ಸಭೆಯಲ್ಲಿ ಕೇಂದ್ರ ಸರಕಾರದ ಸಮನ್ವಯಕಾರ ಎ.ಕೆ.ಮಿಶ್ರಾ ಹಾಗೂ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಭಾಗಿಯಾಗಿರಲಿಲ್ಲ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗೃಹ ವ್ಯವಹಾರಗಳ ಸಚಿವಾಲಯವು, ಮಣಿಪುರ ರಾಜ್ಯದಲ್ಲಿನ ಹಾಲಿ ಪರಿಸ್ಥಿತಿಯ ಕುರಿತು ಚರ್ಚಿಸಲು ಮಣಿಪುರ ವಿಧಾನಸಭೆಯಲ್ಲಿ ಕುಕಿ-ಝೊ-ಹ್ಮಾರ್, ಮೈತೈ ಹಾಗೂ ನಾಗಾ ಸಮುದಾಯಗಳನ್ನು ಪ್ರತಿನಿಧಿಸುವ ಚುನಾಯಿತ ಪ್ರತಿನಿಧಿಗಳ ಗುಂಪು ಸಭೆ ಸೇರಿತ್ತು ಎಂದು ಹೇಳಿದೆ.
“ಮತ್ತಷ್ಟು ಮುಗ್ಧ ನಾಗರಿಕರ ಅಮೂಲ್ಯ ಜೀವಗಳ ನಷ್ಟವನ್ನು ತಪ್ಪಿಸಲು ಹಿಂಸಾಚಾರದ ಮಾರ್ಗವನ್ನು ತೊರೆಯುವಂತೆ ರಾಜ್ಯದಲ್ಲಿನ ಎಲ್ಲ ಸಮುದಾಯಗಳಿಗೆ ಮನವಿ ಮಾಡಲು ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮೇ 3, 2023ರ ನಂತರ ಇದೇ ಪ್ರಥಮ ಬಾರಿಗೆ ಮೈತೈ ಮತ್ತು ಕುಕಿ ಸಮುದಾಯದ ಶಾಸಕರು ಒಂದೇ ಕೊಠಡಿಯಲ್ಲಿ ಸೇರಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಮೈತೈ ಸಮುದಾಯದ ಬಾಹುಳ್ಯವಿರುವ ಇಂಫಾಲ ಕಣಿವೆ ಹಾಗೂ ರಾಜ್ಯ ರಾಜಧಾನಿ ಇಂಫಾಲಕ್ಕೆ 10 ಮಂದಿ ಕುಕಿ ಶಾಸಕರ ಪೈಕಿ ಯಾರೊಬ್ಬರೂ ಈವರೆಗೆ ಕಾಲಿಟ್ಟಿಲ್ಲ. ಅಲ್ಲಿಂದ ನಡೆದಿರುವ ಎಲ್ಲ ವಿಧಾನಸಭಾ ಅಧಿವೇಶನಗಳಿಗೂ ಅವರು ಗೈರಾಗಿದ್ದಾರೆ.
ಎರಡೂ ಕಡೆಯುವರು ಸುದೀರ್ಘ ಕಾಲದಿಂದ ನಡೆಯುತ್ತಿರುವ ಸಂಘರ್ಷದಿಂದ ಎರಡೂ ಸಮುದಾಯಗಳು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಮಂಡಿಸಿದರು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಇದಲ್ಲದೆ, ಸಭೆಯಲ್ಲಿದ್ದ ಶಾಸಕರು ಭವಿಷ್ಯದ ದಿನಗಳು ಹಾಗೂ ಮುಂಬರುವ ದಿನಗಳಲ್ಲಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತೂ ಚರ್ಚಿಸಿದರು. ಆದರೆ, ಈ ವಿಷಯದಲ್ಲಿ ಯಾವುದೇ ಖಚಿತ ನಿಲುವು ಹೊರಹೊಮ್ಮಲಿಲ್ಲ ಎಂದೂ ಹೇಳಲಾಗಿದೆ.
ಸಭೆಯಲ್ಲಿ ಸಂಬಿತ್ ಪಾತ್ರ ಉಪಸ್ಥಿತರಿದ್ದ ಕುರಿತು ಪ್ರತಿಕ್ರಿಯಿಸಿರುವ ಮೂಲಗಳು, ಸಂಬಿತ್ ಪಾತ್ರ ಈಶಾನ್ಯ ರಾಜ್ಯಗಳ ಬಿಜೆಪಿ ಸಮನ್ವಯಕಾರರಾಗಿದ್ದು, ಮಣಿಪುರ ಶಾಸಕರನ್ನು ರಾಷ್ಟ್ರ ರಾಜಧಾನಿಗೆ ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿವೆ.
ಸಭೆಯಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ತೋಕೊಮ್ ಸತ್ಯಬ್ರತ ಸಿಂಗ್, ತೊಂಗ್ ಬ್ರಮ್ ರೊಬಿಂದ್ರೊ, ಮೈತೈ ಸಮುದಾಯದ ಪರವಾಗಿ ಥ. ಬಸಂತ್ ಕುಮಾರ್ ಸಿಂಗ್ ಸಿಂಗ್ ಹಾಗೂ ಕುಕಿ ಸಮುದಾಯದ ರಾಜ್ಯ ಸಚಿವರಾದ ಲೆಟ್ಪಾವೊ ಹೌಕಿಪ್ ಮತ್ತು ನೇಮ್ಚಾ ಕಿಪ್ಗೆನ್ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ನಾಗಾ ಸಮುದಾಯವನ್ನು ಶಾಸಕರಾದ ರಾಮ್ ಮುಯಿವಾ, ಅವಾಂಗ್ ಬೋ ನ್ಯೂಮೈ ಹಾಗೂ ಎಲ್.ಡಿಖೊ ಪ್ರತಿನಿಧಿಸಿದ್ದರು ಎಂದು ಹೇಳಲಾಗಿದೆ.