ಮಣಿಪುರ: ಬಿಹಾರದ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣ; 8 ಮಂದಿ ಶಂಕಿತ ಉಗ್ರರ ಬಂಧನ
ಸಾಂದರ್ಭಿಕ ಚಿತ್ರ | PTI
ಇಂಫಾಲ: ಇತ್ತೀಚೆಗೆ ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಣಿಪುರದ ಕಕ್ಚಿಂಗ್ ಜಿಲ್ಲೆಯಿಂದ ನಿಷೇಧಿತ ಉಗ್ರ ಸಂಘಟನೆ ಕಂಗ್ಲೈಪಕ್ ಕಮ್ಯೂನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್)ನ 8 ಮಂದಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಬ್ಬರು ಕಾರ್ಮಿಕರನ್ನು ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲು ಮಣಿಪುರದಾದ್ಯಂತ ಡಿಸೆಂಬರ್ 14ರಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಲ್ಲದೆ, ಕಕ್ಚಿಂಗ್ ಲಾಮ್ಖೈ ಪ್ರದೇಶದಿಂದ ಕೆಸಿಪಿ (ಪಿಡಬ್ಲ್ಯುಜಿ)ಯ ಸಕ್ರಿಯ ಸದಸ್ಯನೋರ್ವನನ್ನು ಸೋಮವಾರ ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆತ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರ ತಂಡ ಕಕ್ಚಿಂಗ್ ಮಾಮಂಗ್ ಚಿಂಗ್ ಲೈಫಾಂಗ್ ಲೋಕ್ನಂಗ್ ಪ್ರದೇಶದ ಶಿಬಿರದ ಮೇಲೆ ದಾಳಿ ನಡೆಸಿತು ಹಾಗೂ ಕೆಸಿಪಿ (ಪಿಡಬ್ಲ್ಯುಜಿ)ಯ 8 ಸದಸ್ಯರನ್ನು ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅವರಿಂದ ಶಸ್ತ್ರಾಸ್ತ್ರ, ಸ್ಫೋಟಕ ಹಾಗೂ 10 ಮೊಬೈಲ್ ಫೋನ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಬಿಹಾರದ ಸಹೋದರರಾದ ಸುನಾಲಾಲ್ ಕುಮಾರ್ (18) ಹಾಗೂ ದಶರಥ ಕುಮಾರ್ (17) ರನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಖಂಡಿಸಿದ್ದರು.