ಮಣಿಪುರ ಮಿಝೋರಾಂನಂತೆ ಒಂದು ಜಿಲ್ಲೆಯಾಗಿರಲಿಲ್ಲ : ಮಣಿಪುರ ಸಿಎಂ ಬಿರೇನ್ ಸಿಂಗ್
ಮಿಝೋರಾಂ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು
ಎನ್.ಬಿರೇನ್ ಸಿಂಗ್ | PC : PTI
ಇಂಫಾಲ : ಮಣಿಪುರ ಒಂದು ಕಾಲದಲ್ಲಿ ಅಸ್ಸಾಂನ ಜಿಲ್ಲೆಯಾಗಿದ್ದ ಮಿಝೋರಾಂನಂತಲ್ಲ ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ, ಮಿಝೋರಾಂ ಮುಖ್ಯಮಂತ್ರಿ ಲಾಲ್ಡುಹೋಮ ದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಬದಲು ಒಳ್ಳೆಯ ನೆರೆಹೊರೆಯವರಾಗಿ, ಉತ್ತಮ ಮುತ್ಸದ್ದಿತನ ಪ್ರದರ್ಶಿಸಬೇಕು ಎಂದು ಮಣಿಪುರ ಸರಕಾರ ಕಿವಿಮಾತು ಹೇಳಿತ್ತು.
ಇತ್ತೀಚೆಗೆ ರಾಷ್ಟ್ರೀಯ ದೈನಿಕವೊಂದಕ್ಕೆ ಸಂದರ್ಶನ ನೀಡಿದ್ದ ಮಿಝೋರಾಂ ಮುಖ್ಯಮಂತ್ರಿ ಲಾಲ್ಡುಹೋಮ, ಬಿರೇನ್ ಸಿಂಗ್, ಮಣಿಪುರ, ರಾಜ್ಯದ ಜನತೆ ಹಾಗೂ ಬಿಜೆಪಿಗೆ ಉತ್ತರದಾಯಿಯಾಗಿದ್ದಾರೆ. ಅವರ ಆಡಳಿತಕ್ಕೆ ಹೋಲಿಸಿದರೆ, ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದನ್ನು ಪರಿಗಣಿಸಬಹುದಾಗಿದೆ ಎಂದು ಕಳೆದ ಒಂದೂವರೆ ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ಉಲ್ಲೇಖಿಸಿ ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಿರೇನ್ ಸಿಂಗ್ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
ಐತಿಹಾಸಿಕ ಲಾಂಗ್ತಾಬಾಲ್ ಹಳೆಯ ಅರಮನೆ ಆವರಣದಲ್ಲಿರುವ ಅಸ್ಸಾಂ ರೈಫಲ್ಸ್ ಅನ್ನು ಸ್ಥಳಾಂತರಗೊಳಿಸಲು ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮಣಿಪುರ ಮಿಝೋರಾಂನಂತಲ್ಲ. ನಮಗೆ 2,200 ವರ್ಷಗಳ ಲಿಖಿತ ಇತಿಹಾಸವಿದೆ. 1949ರಲ್ಲಿ ಮಣಿಪುರ ಏಕ ಪ್ರಾಂತ್ಯವಾಗಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದೆ. ನಮ್ಮ ಗಡಿಗಳನ್ನು ಹೊಸದಾಗಿ ಸೃಷ್ಟಿಸಲಾಗಿಲ್ಲ. ಬದಲಿಗೆ, ಸುಭದ್ರ ಗಡಿಗಳೊಂದಿಗೆ ನಾವು ಒಕ್ಕೂಟದಲ್ಲಿ ಸೇರ್ಪಡೆಯಾಗಿದ್ದೇವೆ” ಎಂದು ಹೇಳಿದರು.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಣಿಪುರ ಸರಕಾರ ಕೂಡಾ, “ಭಾರತ-ಮಯನ್ಮಾರ್ ಗಡಿಯಲ್ಲಿ ಬೇಲಿ ಅಳವಡಿಸಲು ವಿರೋಧಿಸುತ್ತಿರುವ ಮಿಝೋರಾಂ ಮುಖ್ಯಮಂತ್ರಿ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಹೇಳುವ ಮೂಲಕ, ತಮ್ಮ ಪ್ರಜಾತಾಂತ್ರಿಕ ಮುಖವಾಡವನ್ನು ಬಯಲು ಮಾಡಿಕೊಂಡಿದ್ದಾರೆ. ಅವರು ಝೋ ಸಮುದಾಯ ಮತ್ತೆ ಒಂದುಗೂಡಬೇಕು ಎಂದೂ ಕರೆ ನೀಡಿದ್ದಾರೆ. ಮಣಿಪುರದಲ್ಲಿ ಸಶಸ್ತ್ರ ಉಗ್ರಗಾಮಿಗಳಿರುವ ಕುರಿತೂ ಮಾತನಾಡಿರುವ ಅವರು, ಅವರ ಬಂದೂಕುಗಳು ದಿಲ್ಲಿಯಲ್ಲಿವೆ ಎಂದು ಬೊಟ್ಟು ಮಾಡಿದ್ದಾರೆ. ಇದರೊಂದಿಗೆ ನಿಶ್ಯಸ್ತ್ರೀಕರಣ ಹಾಗೂ ಗಿರಿಪ್ರದೇಶದ ನಾಯಕರೊಂದಿಗೆ ಪ್ರಾಮಾಣಿಕ ಮಾತುಕತೆ ನಡೆಯಬೇಕು ಎಂದೂ ಹೇಳಿದ್ದಾರೆ” ಎಂದು ಹೇಳಿದೆ.