ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪ್ರತಿಭಟನೆ ನಡೆಸಿದ ಮಣಿಪುರ ಪೊಲೀಸ್ ಕಮಾಂಡೋಗಳು
Photo: X/@SocailSameerINC
ಇಂಫಾಲ್: ಮಂಗಳವಾರ ಸಂಜೆ ಇಂಫಾಲದಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಎಎಸ್ಪಿ ಒಬ್ಬರ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಅಪಹರಿಸಿದ ಘಟನೆಯನ್ನು ಖಂಡಿಸಿ ಬುಧವಾರ ನಾಲ್ಕು ಜಿಲ್ಲೆಗಳ ನೂರಾರು ಮಣಿಪುರ ಪೊಲೀಸ್ ಕಮಾಂಡೋಗಳು ಸಾಂಕೇತಿಕವಾಗಿ “ ಆರ್ಮ್ಸ್ ಡೌನ್” ಪ್ರತಿಭಟನೆಯನ್ನು ನಡೆಸಿದ್ದಾರೆ.
ಪಶ್ಚಿಮ ಇಂಫಾಲ್, ಥೌಬಾಲ್, ಕಕ್ಚಿಂಗ್ ಮತ್ತು ಬಿಷ್ಣುಪುರ್ ಜಿಲ್ಲೆಗಳ ಕಮಾಂಡೋಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ್ದಾರೆ.
ಸುಮಾರು 200 ಮಂದಿ ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡ ಇಂಫಾಲ ಪಶ್ಚಿಮ ಜಿಲ್ಲಾ ಹೆಚ್ಚುವರಿ ಎಸ್ಪಿ ಮೊಯಿರಂಗ್ತೆಂ ಅಮಿತ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಸಿಂಗ್ ಮತ್ತವರ ಬೆಂಗಾವಲು ಸಿಬ್ಬಂದಿಯೊಬ್ಬರನ್ನು ಅಪಹರಿಸಿದ್ದರು.
ನಂತರ ತ್ವರಿತ ಕಾರ್ಯಾಚರಣೆಯಲ್ಲಿ ಅವರನ್ನು ರಕ್ಷಿಸಲಾಗಿತ್ತು. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಅಧಿಕಾರಿಯ ಆರೋಗ್ಯ ವಿಚಾರಿಸಿದ್ದಾರೆ.