ಮಣಿಪುರ: ಹಿಂಸಾಚಾರದಲ್ಲಿ ಮೃತಪಟ್ಟ ಕುಕಿಗಳ ಅಂತ್ಯಕ್ರಿಯೆ ಮುಂದೂಡಿಕೆ
ಪ್ರಸ್ತಾವಿತ ಸಾಮೂಹಿಕ ದಫನ ಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ
ಮೃತಪಟ್ಟ ಕುಕಿ-ರೆ ಬುಡಕಟ್ಟಿನ ಜನರ ಸಾಮೂಹಿಕ ಅಂತ್ಯಕ್ರಿಯೆ .| Photo: PTI
ಇಂಫಾಲ: ಮಣಿಪುರ ಜನಾಂಗೀಯಹಿಂಸಾಚಾರದಲ್ಲಿ ಮೃತಪಟ್ಟ ಕುಕಿ-ರೆ ಬುಡಕಟ್ಟಿನ ಜನರ ಸಾಮೂಹಿಕ ಅಂತ್ಯಕ್ರಿಯೆಯನ್ನು ಮುಂದೂಡಲಾಗಿದೆ. ಸಾಮೂಹಿಕ ಅಂತ್ಯಕ್ರಿಯೆ ನಡೆಯಲಿದ್ದ ಚುರಾಚಂದ್ಪುರ ಜಿಲ್ಲೆಯ ಪ್ರಸ್ತಾವಿತ ಜಾಗದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮಣಿಪುರದ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಜೊತೆ ಕುಕಿ ಬುಡಕಟ್ಟು ನಾಯಕರು ಮಾತುಕತೆ ನಡೆಸಿದ ಬಳಿಕ, ಚುರಾಚಂದ್ಪುರದಲ್ಲಿ 35 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರ್ಯಕ್ರಮನ್ನು ಮುಂದೂಡಲಾಯಿತೆಂದು ಕುಕಿ ಬುಡಕಟ್ಟು ಸಂಘಟನೆಗಳ ಸರ್ವೋಚ್ಚ ಮಂಡಳಿಯಾದ ಐಟಿಎಲ್ಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ನೂತನ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾವು ನಿನ್ನೆರಾತ್ರಿಯಿಂದ ಇಂದು ಮುಂಜಾನೆ 4:00 ಗಂಟೆಯವರೆಗೂ ಗೃಹ ಸಚಿವಾಲಯದ ಜೊತೆ ಮ್ಯಾರಥಾನ್ ಮಾತುಕತೆ ನಡೆಸಿದೆವು. ಸಾಮೂಹಿಕ ಅಂತ್ಯಕ್ರಿಯೆ ಕಾರ್ಯಕ್ರಮವನ್ನು ಮುಂದಿನ ನಾಲ್ಕೈದು ದಿನಗಳ ಕಾಲ ಮುಂದೂಡಬೇಕೆಂದು ಅವರು ಮನವಿ ಮಾಡಿದರು. ಒಂದು ವೇಳೆ ಈ ಮನವಿಗೆ ಸಮ್ಮತಿಸಿದಲ್ಲಿ ಅದೇ ಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುವುದಾಗಿ ಸಚಿವಾಲಯ ಭರವಸೆ ನೀಡಿದೆಯೆಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ(ಐಟಿಎಲ್ಎಫ್) ಹೇಳಿಕೆಯೊಂದರಲ್ಲಿ ತಿಳಿಸಿದೆ.ಅದರೆ ಗೃಹ ಸಚಿವಾಲಯವು ಈ ಬಗ್ಗೆ ಲಿಖಿತ ಭರವಸೆಯನ್ನು ನೀಡಿಲ್ಲ’’ ಎಂದು ಅದು ತಿಳಿಸಿದೆ.
ಕುಕಿ ರೆ ಸಮುದಾಯದ ಸಾಮೂಹಿಕ ದಫನ ಸ್ಥಳವನ್ನು ಕಾನೂನುಬದ್ಧಗೊಳಿಸುವುದು, ಕುಕಿ-ರೆ ಸಮುದಾಯಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಪರ್ವತ ಜಿಲ್ಲೆಗಳಲ್ಲಿ ಮೈತೈ ಸಮುದಾಯದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಕೂಡದು, ಇಂಫಾಲದಲ್ಲಿ ಉಳಿದಿರುವ ಇತರ ಕುಕಿ-ರೆ ಸಮುದಾಯದದವರ ಮೃತದೇಹಗಳನ್ನು ಚುರಾಚಂದ್ಪುರಕ್ಕೆ ತರುವುದು,ಕುಕಿರೆ ಪ್ರಾಬಲ್ಯದ ಪ್ರದೇಶಗಳನ್ನು ಮಣಿಪುರದಿಂದ ಪ್ರತ್ಯೇಕಗೊಳಿಸುವುದು ಹಾಗೂ ಇಂಫಾಲದ ಜೈಲುಗಳಲ್ಲಿರುವ ಬುಡಕಟ್ಟು ಕೈದಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಇತರ ರಾಜ್ಯಗಳಿಗೆ ವರ್ಗಾಯಿಸುವುದು ಈ ಐದು ಬೇಡಿಕೆಗಳನ್ನು ತಾವು ಸಚಿವಾಲಯದ ಮುಂದಿಟ್ಟಿರುವುದಾಗಿ ಐಟಿಎಲ್ಎಫ್ನ ವಕ್ತಾರ ಗಿಂಝಾ ವವುಲ್ರೆಂಗ್ ತಿಳಿಸಿದ್ದಾರೆ.
ಈ ಮಧ್ಯೆ ಕೇಂದ್ರ ಗೃಹ ಸಚಿವಾಲಯ ಹೇಳಿಕೆಯೊಂದನ್ನು ನೀಡಿ, ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ಕುರಿತಾದ ವಿವಾದವನ್ನು ಭಾರತ ಸರಕಾರ ಬಗೆಹರಿಸಿದೆ. ಮಣಿಪುರದಲ್ಲಿ ಶಾಂತಿ ಹಾಗೂ ಕೋಮುಸೌಹಾರ್ದತೆಯನ್ನು ಕಾಪಾಡುವಂತೆ ಭಾರತ ಸರಕಾರವು ಸಂಬಂಧಪಟ್ಟವರಲ್ಲಿ ವಿನಂತಿಸುತ್ತದೆ ಹಾಗೂ ವಿವಾದವನ್ನು ಮುಂದಿನ ಏಳು ದಿನಗಳೊಳಗೆ ಎಲ್ಲರಿಗೂ ತೃಪ್ತಿಯಾಗುವತಹ ರೀತಿಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಲು ಸಕಲ ಪ್ರಯತ್ನಗಳನ್ನು ನಡೆಸಲಿದೆಯೆಂದು ತಿಳಿಸಿದೆ.
ಮಣಿಪುರ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಕುಕಿ ರೆ ಬುಡಕಟ್ಟುಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಚುರಾಚಂದಪುರ ಜಿಲ್ಲೆಯ ಹಾವಲಾಯ್ ಕಾಪಿ ಎಂಬಲ್ಲಿ ನಡೆಸಲು ಸಿದ್ಧತೆಗಳು ನಡೆದಿದ್ದವು. ಸುಮಾರು ಮೂರು ತಿಂಗಳುಗಳಿಂದ ಶವಾಗಾರದಲ್ಲಿರುವ ಈ ಮೃತದೇಹಗಳ ಅಂತಿಮಯಾತ್ರೆಯನ್ನು ನಡೆಸಲು ಐಟಿಎಲ್ಎಫ್ ನಿರ್ಧರಿಸಿತ್ತು.