ಮಣಿಪುರ: ಮತ್ತೆ ಭುಗಿಲೆದ್ದ ಹಿಂಸಾಚಾರ, ಮೂವರ ಹತ್ಯೆ, ಬಿಷ್ಣುಪುರದಲ್ಲಿ ಕರ್ಫ್ಯೂ ಸಡಿಲಿಕೆ ಮೊಟಕು
Photo: PTI
ಇಂಫಾಲ : ಮಣಿಪುರದ ಬಿಷ್ಣುಪುರ ಹಾಗೂ ಚುರಾಚಾಂದ್ಪುರ ಜಿಲ್ಲೆಗಳ ಗಡಿಗಳಲ್ಲಿ ಶನಿವಾರ ರಾತ್ರಿ ಮತ್ತೆ ಭುಗಿಲೆದ್ದ ಹಿಂಸಾಚಾರದಲ್ಲಿ ಮೂವರು ಹತ್ಯೆಯಾಗಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಬಿಷ್ಣುಪುರ ಆಡಳಿತ ರವಿವಾರ ಜಿಲ್ಲೆಯಲ್ಲಿ ಕರ್ಫ್ಯೂ ಸಡಿಲಿಕೆ ಅವಧಿಯನ್ನು ಮೊಟಕುಗೊಳಿಸಿದೆ. ಈಗ ನಿರ್ಬಂಧವನ್ನು ಬೆಳಗ್ಗೆ 5 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಸಡಿಲಗೊಳಿಸಲಾಗಿದೆ.
ಬಿಷ್ಣುಪುರ ಜಿಲ್ಲೆಯ ಖೊಯಿಜುಮನ್ ಟಬಿ ಗ್ರಾಮದಲ್ಲಿ ಮಧ್ಯರಾತ್ರಿ ಮೈತೈ ಸಮುದಾಯಕ್ಕೆ ಸೇರಿದ ಮೂವರನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಹತ್ಯೆಯಾದವರನ್ನು ನವೋರೆಮ್ ರಾಜ್ಕುಮಾರ್ (25), ಹಾವೋಬಾಮ್ ಇಬೊಮ್ಚಾ (37) ಹಾಗೂ ನಿಂಗೋಂಬಾಮ್ ಇಬುಂಗ್ಚಾ (32) ಎಂದು ಗುರುತಿಸಲಾಗಿದೆ. ಹತ್ಯೆಯಾದವರು ದಾಳಿಕೋರರಿಂದ ತಮ್ಮ ಮನೆಗಳನ್ನು ರಕ್ಷಿಸಲು ‘ಗ್ರಾಮ ಸ್ವಯಂಸೇವಕರು’ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅವರು ತಮ್ಮ ಮನೆಯ ಕಾವಲು ಕಾಯುತ್ತಿದ್ದಾಗ ಇನ್ನೊಂದು ಕಡೆಯಿಂದ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದಾರೆ ಎಂದು ಬಿಷ್ಣುಪುರದ ಪೊಲೀಸ್ ಉಪ ಆಯುಕ್ತ ಲೋರೆಂಬಮ್ ಬಿಕ್ರಮ್ ಅವರು ಹೇಳಿದ್ದಾರೆ. ಈ ಹಿಂಸಾಚಾರದ ಹಿಂದೆ ಕುಕಿ ಸಮುದಾಯದ ಪಿತೂರಿ ಇದೆ ಎಂದು ಮೈತೈ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ.
‘‘ಕುಕಿ ಸಮುದಾಯದ ಕೆಲವು ಸದಸ್ಯರು ಡ್ರೋನ್ ಕಳುಹಿಸಿದ್ದಾರೆ ಹಾಗೂ ಗ್ರಾಮವನ್ನು ಕೇವಲ 7 ಮಂದಿ ಮಾತ್ರ ಕಾಯುತ್ತಿದ್ದಾರೆ ಎಂದು ಎಂದು ಪತ್ತೆ ಮಾಡಿದ್ದಾರೆ. ಅನಂತರ ಸುಮಾರು 30 ಕುಕಿ ಜನರು ದಾಳಿ ನಡೆಸಿದ್ದಾರೆ. ಮಧ್ಯರಾತ್ರಿಯ ಬಳಿಕ ಖೊಯಿಜುಮನ್ ಟಬಿ ಗ್ರಾಮದಲ್ಲಿದ್ದ ಬಂಕರ್ ಗಳನ್ನು ನಾಶ ಮಾಡಿದ್ದಾರೆ ಹಾಗೂ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿದ್ದಾರೆ.
ಅವರು ದಾಳಿಯನ್ನು ಮುಂದುವರಿಸಿದ್ದಾರೆ ಹಾಗೂ ಮೂವರನ್ನು ಹತ್ಯೆಗೈದಿದ್ದಾರೆ’’ ಎಂದು ಬಿಷ್ಣುಪುರದ ಮೊಯಿರಂಗ್ ಪಟ್ಟಣದ ನಿವಾಸಿ ಶ್ಯಾಮ್ ಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭರವಸೆಯ ಹೊರತಾಗಿಯು ಕುಕಿಗಳಿಂದ ನಡೆಯುತ್ತಿರುವ ನಿರಂತರ ದಾಳಿಯ ವಿರುದ್ಧ ಪ್ರತಿಭಟನಾರ್ಥವಾಗಿ ಮೃತದೇಹಗಳನ್ನು ಸ್ಥಳೀಯ ಶಾಸಕರ ಮನೆಗೆ ಕೊಂಡೊಯ್ಯಲಾಯಿತು ಎಂದು ಅವರು ಹೇಳಿದ್ದಾರೆ.
ಅನಂತರ ಮೈತೈ ಸಮುದಾಯದ ಸದಸ್ಯರು ಪ್ರತಿದಾಳಿ ನಡೆಸಿದರು ಹಾಗೂ ಸೆಂಗೆಂಗ್ ಪ್ರದೇಶದ ಸಮೀಪ ಇರುವ ಕುಕಿ ಸಮುದಾಯದ ಸದಸ್ಯರ ಮನೆಗಳಿಗೆ ಬೆಂಕಿ ಹಚ್ಚಿದರು. ಲೆಂಗ್ಜಾ ಗ್ರಾಮದಲ್ಲಿರುವ ಕುಕಿ ಸಮುದಾಯದ ಸದಸ್ಯರಿಗೆ ಸೇರಿದ ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ಕುಮಾರ್ ತಿಳಿಸಿದ್ದಾರೆ. ಈ ನಡುವೆ, ಕುಕಿ-ರೊ ಸಮುದಾಯಕ್ಕೆ ಸೇರಿದ ಡೇವಿಡ್ ಥೈಕ್ ಎಂಬವರನ್ನು ಮೈತೈ ಸಮುದಾಯದ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ‘ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫಾರಂ’ ಆರೋಪಿಸಿದೆ. ಆದರೆ, ಈ ಹತ್ಯೆಯನ್ನು ಚುರಾಚಾಂದ್ಪುರದ ಪೊಲೀಸ್ ಅಧೀಕ್ಷಕರು ದೃಢಪಡಿಸಿಲ್ಲ.
ಹಿಂಸಾಚಾರ ಯೋಜಿತವೆಂದು ಕಾಣುತ್ತದೆ: ಮಣಿಪುರ ಸಿಎಂ
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಯೋಜಿತವೆಂದು ಕಾಣುತ್ತದೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಶನಿವಾರ ಹೇಳಿದ್ದಾರೆ. ಅಲ್ಲದೆ, ಈ ಹಿಂಸಾಚಾರದಲ್ಲಿ ಬಾಹ್ಯಾ ಶಕ್ತಿಗಳು ಭಾಗಿಯಾಗಿವೆ ಎಂಬ ಸುಳಿವನ್ನೂ ಅವರು ನೀಡಿದ್ದಾರೆ. ಈ ಹಿಂಸಾಚಾರದಲ್ಲಿ ಅಂತಾರಾಷ್ಟ್ರೀಯ ಸಂಘಟನೆಗಳು ಭಾಗಿಯಾಗಿರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಸಿಂಗ್, ಅದರ ಸಾಧ್ಯತೆ ನಿರಾಕರಿಸಲು ಅಥವಾ ದೃಢಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮಣಿಪುರ ತನ್ನ ಗಡಿಯನ್ನು ಮ್ಯಾನ್ಮಾರ್ನೊಂದಿಗೆ ಹಂಚಿಕೊಂಡಿದೆ. ಚೀನಾ ಕೂಡ ಸಮೀಪದಲ್ಲಿದೆ. ನಮ್ಮ 398 ಕಿ.ಮೀ.ಗೂ ಅಧಿಕ ಗಡಿಗಳು ಕಾವಲು ರಹಿತವಾಗಿವೆ. ನಮ್ಮ ಮುಂಚೂಣಿ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಆದರೆ, ಈ ನಿಯೋಜನೆ ವಿಸ್ತಾರವಾದ ಪ್ರದೇಶಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಕೆಲವು ಗಂಟೆಗಳ ಹಿಂದೆ ತಾನು ಕುಕಿ ಸಹೋದರರು ಹಾಗೂ ಸಹೋದರಿಯರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಎಲ್ಲವನ್ನೂ ಕ್ಷಮಿಸಿ ಹಾಗೂ ಮರೆಯಿರಿ. ರಾಜಿ ಮಾಡಿಕೊಳ್ಳಿ ಹಾಗೂ ಈ ಹಿಂದಿನಂತೆ ಒಟ್ಟಾಗಿ ಜೀವಿಸಿ ಎಂದು ನಾನು ಅವರಿಗೆ ತಿಳಿಸಿದ್ದೇನೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.