ಮಣಿಪುರದಲ್ಲಿ ಹಿಂಸಾಚಾರ ನಿಲ್ಲಿಸಲು ಆಧ್ಯತೆ ನೀಡಿ : ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಮೋಹನ್ ಭಾಗವತ್ (PTI)
ನಾಗಪುರ : “ಮಣಿಪುರವು ಒಂದು ವರ್ಷದಿಂದ ಶಾಂತಿಗಾಗಿ ಕಾಯುತ್ತಿದೆ. ಅಲ್ಲಿನ ಹಿಂಸಾಚಾರವನ್ನು ನಿಲ್ಲಿಸುವುದಕ್ಕೆ ಆದ್ಯತೆ ನೀಡಬೇಕು” ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಬಾರಿಗೆ ಈಶಾನ್ಯ ರಾಜ್ಯವಾದ ಮನಣಿಪುರದ ಕುರಿತು ಮೋಹನ್ ಭಾಗವತ್ ಮಾತನಾಡಿದ್ದಾರೆ. ನಾಗಪುರದಲ್ಲಿ ಆರೆಸ್ಸೆಸ್ ಪ್ರಶಿಕ್ಷಣಾರ್ಥಿಗಳ ಗುಂಪನ್ನು ಉದ್ದೇಶಿಸಿ ಸೋಮವಾರ ಸಂಜೆ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
“ಮಣಿಪುರ ಶಾಂತಿಗಾಗಿ ಕಾದು ಒಂದು ವರ್ಷವಾಗಿದೆ, ಕಳೆದ 10 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿತ್ತು. ಆದರೆ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಬಂದೂಕು ಸಂಸ್ಕೃತಿ ಹೆಚ್ಚಾಗಿದೆ. ಆದ್ಯತೆಯ ಮೇಲೆ ಇಲ್ಲಿನ ಸಂಘರ್ಷ ಪರಿಹರಿಸುವ ಕೆಲಸವಾಗಬೇಕು” ಎಂದು ಅವರು ಹೇಳಿದ್ದಾರೆ.
“ಚುನಾವಣೆಯಲ್ಲಿ ಒಂದು ಪಕ್ಷವನ್ನು ಸೋಲಿಸಿ ಇನ್ನೊಂದು ಪಕ್ಷವು ಅಧಿಕಾರಕ್ಕೇರಲು ಬಹಳಷ್ಟು ಪೈಪೋಟಿ ನೀಡುತ್ತದೆ. ಇದೆಲ್ಲಾ ಆಗಬೇಕಾದದ್ದೇ. ಸಂಸತ್ತಿನಲ್ಲಿ ಎರಡು ಪಕ್ಷಗಳಿವೆ. ಅದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಅಡಳಿತ ಪಕ್ಷ, ಇನ್ನೊಂದು ಪ್ರತಿಪಕ್ಷ. ಪ್ರತಿಪಕ್ಷವನ್ನು ವಿರೋಧ ಪಕ್ಷ ಎನ್ನುವುದು ಸರಿಯಲ್ಲ. ನನ್ನ ಪ್ರಕಾರ ಅದು ಪ್ರತಿಪಕ್ಷ ಎಂದು ಭಾವಿಸಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ” ಎಂದರು.
“ರಕ್ಷಣಾ ತಂತ್ರ, ಕ್ರೀಡೆ, ಸಂಸ್ಕೃತಿ, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ನಾವು ಸವಾಲುಗಳನ್ನು ಎದುರಿಸಿ ದಾಪುಗಾಲು ಹಾಕಿದ್ದೇವೆ. ವಿಶ್ವವೇ ನಮ್ಮೆಡೆಗೆ ತಿರುಗಿ ನೋಡುತ್ತಿದೆ. ನಮಗೆ ಮಣೆ ಹಾಕುತ್ತಿದೆ. ಹಾಗೆಂದ ಮಾತ್ರಕ್ಕೆ ನಾವು ಎಲ್ಲವನ್ನೂ ಜಯಿಸಿದ್ದೇವೆ ಎಂದಲ್ಲ” ಎಂದು ಪರೋಕ್ಷವಾಗಿ ಬಿಜೆಪಿ ಸರಕಾರವನ್ನು ಅವರು ತಿವಿದರು.