ಮಣಿಪುರ: ನಾಪತ್ತೆಯಾಗಿರುವ ನಾಲ್ವರ ಪೈಕಿ ಮೂವರು ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
ಇಂಫಾಲ: ಮಣಿಪುರದಲ್ಲಿ ಬುಧವಾರ ನಾಪತ್ತೆಯಾಗಿದ್ದ ನಾಲ್ವರು ಮೆತೈ ಪುರುಷರ ಪೈಕಿ ಮೂವರ ಮೃತದೇಹಗಳು ಚುರಚಾಂದ್ಪುರ ಜಿಲ್ಲೆಯ ಹಾವೊಟಕ್ ಫೈಲೆನ್ ಗ್ರಾಮದ ಸಮೀಪ ಗುರುವಾರ ಪತ್ತೆಯಾಗಿವೆ ಎಂದು ‘ಇಂಫಾಲ ಫ್ರೀ ಪ್ರೆಸ್’ ವರದಿ ಮಾಡಿದೆ.
ಈ ನಾಲ್ವರು ಕುಂಬಿ ಮತ್ತು ಬಿಷ್ಣುಪುರ ಜಿಲ್ಲೆಯವರಾಗಿದ್ದಾರೆ. ಉರುವಲು ತರಲು ಹೋಗಿದ್ದಾಗ ಈ ವ್ಯಕ್ತಿಗಳು ನಾಪತ್ತೆಯಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಅವರನ್ನು ಆನಂದ್ ಸಿಂಗ್, ದಾರಾ ಸಿಂಗ್, ಇಬೊಮ್ಚ ಸಿಂಗ್ ಮತ್ತು ರೊಮೇನ್ ಸಿಂಗ್ ಎಂಬುದಾಗಿ ಗುರುತಿಸಲಾಗಿದೆ.
ಇನ್ನೊಂದು ಘಟನೆಯಲ್ಲಿ, ಹಾವೊಟಕ್ ಫೈಲೆನ್ ಗ್ರಾಮದಲ್ಲಿ ಗುರುವಾರ ಗುಂಡಿನ ಕಾಳಗವೊಂದು ನಡೆದಿದೆ. ಇದರ ಬೆನ್ನಿಗೇ, 100ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ. ಗುಂಡಿನ ಕಾಳಗದಲ್ಲಿ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಮಣಿಪುರದಲ್ಲಿ, ಕಳೆದ ವರ್ಷದ ಮೇ ತಿಂಗಳಿನಿಂದ ಬಹುಸಂಖ್ಯಾತ ಮೆತೈ ಮತ್ತು ಅಲ್ಪಸಂಖ್ಯಾತ ಕುಕಿ ಸಮುದಾಯಗಳ ಜನರು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದಾರೆ. ಸಂಘರ್ಷದಲ್ಲಿ ಈವರೆಗೆ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 67,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.