ಮಣಿಪುರ ಹಿಂಸಾಚಾರ: 9 ಮೈತೈ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ
Photo: PTI
ಇಂಫಾಲ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 9 ಮೈತೈ ಉಗ್ರಗಾಮಿ ಸಂಘಟನೆ ಮತ್ತು ಅದರ ಸಹಚರ ಗುಂಪುಗಳನ್ನು ದೇಶವಿರೋಧಿ ಚಟುವಟಿಕೆ ಮತ್ತು ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಈ ಸಂಘಟನೆಗಳ ಮೇಲೆ ಸೋಮವಾರ ನಿಷೇಧ ಹೇರಿದೆ.
ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಜನಾಂಗೀಯ ಹಿಂಸಾಚಾರದಲ್ಲಿ ಪಾಲ್ಗೊಂಡ ಉಗ್ರಗಾಮಿ ಗುಂಪುಗಳನ್ನು ಐದು ವರ್ಷಗಳ ಕಾಲ ನಿಷೇಧಿದೆ. ನಿಷೇದಿತ ಉಗ್ರಸಂಘಟನೆಗಳೆಂದರೆ ಪೀಪಲ್ಸ್ ಲಿಬರೇಶನ್ ಆರ್ಮಿ(PLA) ಮತ್ತು ಅದರ ರಾಜಕೀಯ ವಿಭಾಗವಾದ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ (RPF̧) ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF) ಮತ್ತು ಅದರ ಸಶಸ್ತ್ರ ವಿಭಾಗ ಮಣಿಪುರ ಪೀಪಲ್ಸ್ ಆರ್ಮಿ (MPA). ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್ (PREPAK) ಮತ್ತು ಅದರ ಸಶಸ್ತ್ರ ವಿಭಾಗ ರೆಡ್ ಆರ್ಮಿ, ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (KCP) ಮತ್ತು ಅದರ ಸಶಸ್ತ್ರ ವಿಭಾಗ (ಕೆಂಪು ಸೈನ್ಯ ಎಂದೂ ಕರೆಯುತ್ತಾರೆ), ಕಂಗ್ಲೇ ಯೋಲ್ ಕನ್ಬಾ ಲುಪ್ (KYKL), ಸಮನ್ವಯ ಸಮಿತಿ (CorCom) ) ಮತ್ತು ಅಲಯನ್ಸ್ ಫಾರ್ ಸೋಷಿಯಲಿಸ್ಟ್ ಯೂನಿಟಿ ಕಾಂಗ್ಲೀಪಾಕ್ ಮುಂತಾದ ಗುಂಪುಗಳನ್ನು ನಿಷೇದಿಸಲಾಗಿದೆ.
ಮಣಿಪುರದಲ್ಲಿ ಫಿಜಾಮ್ ಹೇಮಜಿತ್ (20), ಹಿಜಾಮ್ ಲಿಂಥೋಯ್ನ್ ಗಂಬಿ (17) ಎಂಬ ಯುವಕ ಮತ್ತು ಯುವತಿ ಜುಲೈ 6ರಂದು ಕಾಣೆಯಾಗಿದ್ದರು. ಬಳಿಕ ಅವರ ಮೃತದೇಹಗಳ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಂಫಾಲ್ ಕಣಿವೆಯಲ್ಲಿ ಜನಾಂಗೀಯ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಇತ್ತೀಚೆಗೆ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.