ಮಣಿಪುರ ಹಿಂಸಾಚಾರಕ್ಕೆ ಮತ್ತೆ 6 ಬಲಿ | ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಬಿರೇನ್
ಕಣ್ಗಾವಲಿಗೆ ಸೇನಾ ಹೆಲಿಕಾಪ್ಟರ್ ಗಳ ನಿಯೋಜನೆ
ಸಿಎಂ ಬಿರೇನ್ | PC : PTI
ಇಂಫಾಲ : ಮಣಿಪುರದ ಜಿರಿಬಮ್ ಜಿಲ್ಲೆಯಲ್ಲಿ ಮರುಕಳಿಸಿದ ಹಿಂಸಾಚಾರದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, ಗಲಭೆ ಪೀಡಿತ ಪ್ರದೇಶಗಳ ಕಣ್ಗಾವಲಿಗೆ ಸೇನಾ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ದಾಳಿಕೋರರನ್ನು ಪತ್ತೆ ಹಚ್ಚಲು ಡ್ರೋಣ್ ಪತ್ತೆ ವ್ಯವಸ್ಥೆಯನ್ನು ಹೊಂದಿದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಮುಂದಾಗಿದೆ. ಇಂಫಾಲ ಕಣಿವೆ ಪ್ರದೇಶದಲ್ಲಿ ಡ್ರೋಣ್ ಹಾಗೂ ರಾಕೆಟ್ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಪಕ್ಷದ ಮತ್ತು ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಶಾಸಕರ ಜತೆ ರಾತ್ರಿ ತುರ್ತು ಸಭೆ ನಡೆಸಿದರು ಎಂದು ಉನ್ನತ ಮೂಲಗಳು ಹೇಳಿವೆ. ತಕ್ಷಣವೇ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಎಲ್.ಆಚಾರ್ಯ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು.
ಶಂಕಿತ ಉಗ್ರರು ಶುಕ್ರವಾರ ಇಂಫಾಲ ಕಣಿವೆಯ ಬಿಷ್ಣುಪುರ ಜಿಲ್ಲೆಯಲ್ಲಿ ಧೀರ್ಘದೂರ ಸಾಮಥ್ರ್ಯದ ರಾಕೆಟ್ಗಳನ್ನು ಸಿಡಿಸಿ ಒಬ್ಬ ಅರ್ಚಕರನ್ನು ಹತ್ಯೆ ಮಾಡಿ, ಇತರ ಐದು ಮಂದಿಯನ್ನು ಗಾಯಗೊಳಿಸಿದ ಬಳಿಕ ಹಿಂಸಾಚಾರ ಮರುಕಳಿಸಿದೆ.
ಶನಿವಾರ ಮುಂಜಾನೆ ದಾಳಿಕೋರರು ಜಿರಿಬಮ್ ಜಿಲ್ಲೆಯ ನಂಗ್ಚಪ್ಪಿ ಎಂಬಲ್ಲಿ ದಾಳಿ ಮಾಡಿ ಯೆರೆಂಬಮ್ ಕುಲೇಂದ್ರ ಸಿಂಗ (63) ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಪಕ್ಕದ ರಶೀದ್ಪುರ ಗ್ರಾಮಕ್ಕೂ ನುಗ್ಗಿದ ದಾಳಿಕೋರರು ಸ್ಥಳೀಯ ಕಾರ್ಯಕರ್ತರ ಜತೆ ಸಶಸ್ತ್ರ ಯುದ್ಧವನ್ನು ನಡೆಸಿ, ಬಸ್ಪತಿಮಯೂಮ್ ಲಾಖಿ ಕುಮಾರ್ ಶರ್ಮಾ (41) ಎಂಬುವವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಜಿರಿಬಮ್ ಎಸ್ಪಿ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿದಾಗಲೂ ದೊಡ್ಡ ಪ್ರಮಾಣದ ಗುಂಡಿನ ದಾಳಿಯನ್ನು ಎದುರಿಸಬೇಕಾಯಿತು. ಪೊಲೀಸ್ ಮುಖ್ಯಸ್ಥರ ತಂಡ ಇತರ ಮೂರು ಮೃತದೇಹಗಳನ್ನು ಪತ್ತೆ ಮಾಡಿದೆ ಎಂದು ಮಣಿಪುರ ಐಜಿ (ಗುಪ್ತಚರ) ಕೆ.ಕಬೀಬ್ ಹೇಳಿದ್ದಾರೆ.