ಮಣಿಪುರ ಹಿಂಸಾಚಾರ: ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಸಭಾತ್ಯಾಗ
ಲೋಕಸಭಾ ಕಲಾಪ (Photo:PTI)
ಹೊಸದಿಲ್ಲಿ,ಜು.27: ಮಣಿಪುರದಲ್ಲಿಯ ಪರಿಸ್ಥಿತಿಯ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಗುರುವಾರ ಕಾಂಗ್ರೆಸ್ ಸದಸ್ಯರ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಸಭಾತ್ಯಾಗ ನಡೆಸಿದರು.
ಭೋಜನ ಪೂರ್ವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಿರಂತರ ಘೋಷಣೆಗಳ ನಡುವೆ ಎರಡು ಬಾರಿ ಮುಂದೂಡಲ್ಪಟ್ಟಿದ್ದ ರಾಜ್ಯಸಭೆಯು ಭೋಜನೋತ್ತರ ಅವಧಿಗಾಗಿ ಮರುಸಮಾವೇಶಗೊಂಡಾಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಪಕ್ಷ ಸದಸ್ಯರ ಘೋಷಣೆಗಳ ನಡುವೆಯೇ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ, 2023ನ್ನು ಮಂಡಿಸಿದರು.
ಉಪಸಭಾಪತಿ ಹರಿವಂಶ ಅವರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತನಾಡಲು ಅವಕಾಶ ನೀಡಿದಾಗ ಆಡಳಿತ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದರು.
ತಾನು ಮಸೂದೆ ಮತ್ತು ‘ದಿಲ್ ಕಿ ಬಾತ್’ ಕುರಿತು ಮಾತನಾಡಲು ಬಯಸಿದ್ದೇನೆ ಎಂದು ಹೇಳಿದ ಖರ್ಗೆ,ಮಣಿಪುರ ವಿಷಯವನ್ನೆತ್ತಲು ಪ್ರಯತ್ನಿಸಿದರು. ಅದಕ್ಕೆ ಅವಕಾಶ ನೀಡದ ಉಪಸಭಾಪತಿ,ಸದನದ ನಿಯಮಗಳಂತೆ ನೀವು ಮಸೂದೆಯ ಕುರಿತು ಮಾತ್ರ ಮಾತನಾಡಬೇಕು ಎಂದು ತಿಳಿಸಿದರು.
ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರನಡೆದಿದ್ದು,ಮಸೂದೆಯ ಮೇಲೆ ಚರ್ಚೆ ಮುಂದುವರಿಯಿತು.