ಮಣಿಪುರ ಹಿಂಸಾಚಾರ: ಸುಪ್ರೀಂನಿಂದ ಹೈಕೋರ್ಟ್ ನ ಮೂವರು ಮಾಜಿ ಮಹಿಳಾ ನ್ಯಾಯಾಧೀಶರ ಸಮಿತಿ
Justice Geeta Mittal, SHALINI P JOSHI , Asha Menon
ಹೊಸದಿಲ್ಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪರಿಹಾರ ಹಾಗೂ ಪುನರ್ವಸತಿಯ ಮೇಲ್ವಿಚಾರಣೆಗಾಗಿ ಹೈಕೋರ್ಟ್ ನ ಮೂವರು ಮಾಜಿ ಮಹಿಳಾ ನ್ಯಾಯಾಧೀಶರ ಸಮಿತಿಯನ್ನು ರೂಪಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.
ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಶಾಲಿನಿ ಪಿ. ಜೋಶಿ ಹಾಗೂ ಆಶಾ ಮೋಹನ್ ಅವರು ಒಳಗೊಳ್ಳಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನು ಕೂಡ ಒಳಗೊಂಡ ಪೀಠ, ರಾಜ್ಯದಲ್ಲಿ ಕಾನೂನಿನ ಆಡಳಿತದಲ್ಲಿ ನಂಬಿಕೆ ಹಾಗೂ ಆತ್ಮಸ್ಥೈರ್ಯವನ್ನು ಮರು ಸ್ಥಾಪಿಸುವುದು ಸುಪ್ರೀಂ ಕೋರ್ಟ್ನ ಪ್ರಯತ್ನವಾಗಿದೆ ಎಂದಿದೆ.
ಪರಿಹಾರ ಹಾಗೂ ಪುನರ್ವಸತಿಯ ಮೇಲ್ವಿಚಾರಣೆಯನ್ನು ನ್ಯಾಯಾಂಗ ಸಮಿತಿ ನೋಡಿಕೊಳ್ಳುವುದರೊಂದಿಗೆ, ರಾಜ್ಯದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿರುವ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಪೀಠ ತಿಳಿಸಿದೆ. ವಿವರವಾದ ಆದೇಶವನ್ನು ಸುಪ್ರೀಂ ಕೋರ್ಟ್ ನ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುವುದು ಪೀಠ ಹೇಳಿದೆ.