ಮಣಿಪುರ ಹಿಂಸಾಚಾರ, ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಯು ಭಾರತದ ಆರ್ಥಿಕತೆಗೆ ಅಪಾಯಕಾರಿ: ಮೂಡಿಸ್ ಕಳವಳ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಸೇರಿದಂತೆ ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಯು ಭಾರತದ ಆರ್ಥಿಕತೆಗೆ ಅಪಾಯಕಾರಿ ಅಂಶವಾಗಿದೆ ಜಾಗತಿಕ ಮಟ್ಟದ ಕ್ರೆಡಿಟ್ ರೇಟಿಂಗ್ ಏಜೆನ್ಸಿ ‘ಮೂಡಿಸ್’ ಕಳವಳ ವ್ಯಕ್ತಪಡಿಸಿದೆ.
ಭಾರತದಲ್ಲಿ ನಾಗರಿಕ ಸಮಾಜದ ಹಾಗೂ ರಾಜಕೀಯ ಭಿನ್ನಮತವನ್ನು ಹತ್ತಿಕ್ಕಲಾಗುತ್ತಿರುವ ಕುರಿತಾಗಿಯೂ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ. ಭಾರತದ ಕಡುಬಡತನದ ರಾಜ್ಯಗಳಲ್ಲೊಂದಾದ ಮಣಿಪುರದಲ್ಲಿ ಮೇ 23ರಿಂದೀಚೆಗೆ ಕನಿಷ್ಠ 150 ಮಂದಿಯನ್ನು ಬಲಿತೆಗೆದುಕೊಂಡ ಗಲಭೆಗಳ ಬಗ್ಗೆ ಅದು ತನ್ನ ವರದಿಯಲ್ಲಿ ಗಮನಸೆಳೆದಿದೆ.
ಭಾರತದಲ್ಲಿ ಹೂಡಿಕೆಗೆ ಮೂಡೀಸ್ ‘ಬಿಎಎ3’ ರೇಟಿಂಗ್ ನೀಡಿದೆ. ಆದಾಗ್ಯೂ ದೇಶದ ಆರ್ಥಿಕತೆಯು ಸ್ಥಿರತೆಯನ್ನು ಉಳಿಸಿಕೊಂಡಿದೆ ಎಂದು ವರದಿ ಹೇಳಿದೆ. ಮೂಡೀಸ್ ನ ರೇಟಿಂಗ್ ಮಾಪನದ ಪ್ರಕಾರ ‘‘ ಬಿಎಎ3’’ ಎಂಬುದು ಹೂಡಿಕೆಯ ನಿಟ್ಟಿನಲ್ಲಿ ಅತ್ಯಂತ ಕೆಳಮಟ್ಟದ ರ್ಯಾಂಕಿಂಗ್ ಆಗಿದೆ. ಕಳೆದ ಜೂನ್ ನಲ್ಲಿ ಮೂಡೀಸ್ ಸಂಸ್ಥೆಯ ಜೊತೆ ನಡೆದ ಭಾರತೀಯ ಅರ್ಥಿಕ ತಜ್ಞರು, ಹೂಡಿಕೆ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸಲು ಬಲವಾದ ಪ್ರತಿಪಾದನೆ ಮಾಡಿದ್ದ ಹೊರತಾಗಿಯೂ ಸಂಸ್ಥೆಯ ರೇಟಿಂಗ್ ನಲ್ಲಿ ಏರಿಕೆಯನ್ನು ಮಾಡಿಲ್ಲ.