ಮಣಿಪುರ ಹಿಂಸಾಚಾರ : ಮೃತರ ಕುಟುಂಬಗಳಿಗೆ ತಲಾ 10 ಲ.ರೂ. ಪರಿಹಾರಕ್ಕೆ ಎನ್ಎಚ್ಆರ್ಸಿ ಸೂಚನೆ
Photo: PTI
ಗುವಾಹಟಿ: ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ವು ಕಳೆದ ಮೇ ತಿಂಗಳಿನಿಂದ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟಿರುವ ಎಲ್ಲ ವ್ಯಕ್ತಿಗಳ ಕುಟುಂಬಗಳಿಗೆ ತಲಾ 10 ಲ.ರೂ.ಗಳ ಪರಿಹಾರವನ್ನು ನಾಲ್ಕು ವಾರಗಳಲ್ಲಿ ಪಾವತಿಸುವಂತೆ ಮಣಿಪುರ ಸರಕಾರಕ್ಕೆ ಸೂಚಿಸಿದೆ.
ಈಶಾನ್ಯ ರಾಜ್ಯಗಳ ಪ್ರಕರಣಗಳ ವಿಚಾರಣೆಗಾಗಿ ಗುವಾಹಟಿಯಲ್ಲಿ ತನ್ನೆರಡು ದಿನಗಳ ಶಿಬಿರವನ್ನು ಶುಕ್ರವಾರ ಅಂತ್ಯಗೊಳಿಸಿದ ಬಳಿಕ ಎನ್ಎಚ್ಆರ್ಸಿ, ಆರು ವಾರಗಳಲ್ಲಿ ಹಾನಿಗೀಡಾಗಿರುವ ಮನೆಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸುವಂತೆ ಮತ್ತು ಸಂತ್ರಸ್ತರಿಗೆ ತಲಾ 10 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆಯೂ ಸರಕಾರಕ್ಕೆ ಸೂಚಿಸಿತು.
ಮಣಿಪುರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 2 ಮತ್ತು 37ರಲ್ಲಿಯ ತಡೆಯನ್ನು ತೆರವುಗೊಳಿಸುವಂತೆಯೂ ಅದು ರಾಜ್ಯ ಸರಕಾರಕ್ಕೆ ಸೂಚಿಸಿದೆ.
‘ಹಿಂಸಾಚಾರದಲ್ಲಿ ಮೃತಪಟ್ಟ 93 ವ್ಯಕ್ತಿಗಳ ಕುಟುಂಬಗಳಿಗೆ ತಲಾ 10 ಲ.ರೂ.ಗಳ ಪರಿಹಾರವನ್ನು ಪಾವತಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ, ನಿರ್ದಿಷ್ಟ ದಿನಾಂಕದರವರೆಗೆ 180 ಜನರು ಮೃತಪಟ್ಟಿದ್ದಾರೆಂದು ನಮಗೆ ಮಾಹಿತಿ ನೀಡಲಾಗಿದೆ. ಉಳಿದ ಮೃತರ ಕುಟುಂಬಗಳಿಗೆ ಪರಿಹಾರ ಪಾವತಿ ಪ್ರಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ನಾವು ಸರಕಾರಕ್ಕೆ ಸೂಚಿಸಿದ್ದೇವೆ ’ ಎಂದು ಎನ್ಎಚ್ಆರ್ಸಿ ಅಧ್ಯಕ್ಷ ನ್ಯಾ.ಅರುಣಕುಮಾರ ಮಿಶ್ರಾ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂಸಾಚಾರದ ಸಂದರ್ಭದಲ್ಲಿ ಹಾನಿಗೀಡಾಗಿರುವ ಮನೆಗಳ ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ, ಆಯೋಗವು ಅಸ್ತಿತ್ವದಲ್ಲಿರುವ ಯೋಜನೆಗೆ ಅನುಗುಣವಾಗಿ ಪರಿಹಾರವನ್ನು ವಿತರಿಸಲು ಆರು ವಾರಗಳಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸುವಂತೆ ಮಣಿಪುರ ಸರಕಾರಕ್ಕೆ ನಿರ್ದೇಶನ ನೀಡಿದೆ. ಸರಕಾರವು ಮನೆಗಳ ಪುನರ್ನಿರ್ಮಾಣಕ್ಕೆ 10 ಲ.ರೂ.ಗಳ ಪರಿಹಾರವನ್ನು ಪ್ರಸ್ತಾವಿಸಿದೆ. ಮನೆಗಳ ಪುನರ್ನಿರ್ಮಾಣ ಶೀಘ್ರ ಆರಂಭಗೊಳ್ಳುವಂತಾಗಲು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅದಕ್ಕೆ ಸೂಚಿಸಲಾಗಿದೆ ಎಂದು ನ್ಯಾ.ಮಿಶ್ರಾ ತಿಳಿಸಿದರು.
ಮಣಿಪುರದ ಕೆಲವು ಭಾಗಗಳಲ್ಲಿ ಈಗಲೂ ಹಿಂಸಾಚಾರ ನಡೆಯುತ್ತಿರುವುದನ್ನು ಗಮನಕ್ಕೆ ತೆಗೆದುಕೊಂಡಿರುವ ಆಯೋಗವು ಸಾಧ್ಯವಾದಷ್ಟು ಶೀಘ್ರ ಸಹಜ ಸ್ಥಿತಿಯ ಮರುಸ್ಥಾಪನೆಗೆ ಮಾರ್ಗಸೂಚಿಯನ್ನು ಸಿದ್ಧಗೊಳಿಸುವಂತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿಯ ನಿರ್ಬಂಧಗಳನ್ನು ತೆರವುಗೊಳಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ ಎಂದೂ ಅವರು ಹೇಳಿದರು.