ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಎರಡು ಸ್ಥಳಗಳನ್ನು ಅಂತಿಮಗೊಳಿಸಿದ ಕೇಂದ್ರ
ಮನಮೋಹನ್ ಸಿಂಗ್ | PC : PTI
ಹೊಸದಿಲ್ಲಿ : ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅವರ ಗೌರವಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲು ಕೇಂದ್ರ ಸರಕಾರವು ರಾಜ್ಘಾಟ್ ಸಮೀಪದ ಎರಡು ಸ್ಥಳಗಳನ್ನು ಅಂತಿಮಗೊಳಿಸಿದೆ. ಸ್ಮಾರಕ ಸ್ಥಾಪನೆಗೆ ಯಮುನಾ ನದಿಯ ತೀರದಲ್ಲಿರುವ ಈ ಎರಡು ಸ್ಥಳಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತೆ ಕೇಂದ್ರ ಗೃಹನಿರ್ಮಾಣ ಹಾಗೂ ನಗರ ವ್ಯವಹಾರ ಸಚಿವಾಲಯವು ಸಿಂಗ್ ಅವರ ಕುಟುಂಬಕ್ಕೆ ತಿಳಿಸಿದೆ.
ಇಂದು ನಡೆದ ವಸತಿ ಹಾಗೂ ನಗರ ವ್ಯವಹಾರ (ಎಂಒಎಚ್ಯುಎ) ಸಚಿವಾಲಯದ ಸಭೆಯಲ್ಲಿ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಎರಡು ಸ್ಥಳಗಳನ್ನು ಅಂತಿಮಗೊಳಿಸಲಾಯಿತು. ಗುರುತಿಸಲಾದ ಎರಡು ಸ್ಥಳಗಳಿಗೆ ಸಿಂಗ್ ಅವರ ಕುಟುಂಬ ಭೇಟಿ ನೀಡಲಿದೆ ಹಾಗೂ ಆನಂತರ ಕುಟುಂಬಿಕರು ಸಚಿವಾಲಯಕ್ಕೆ ಅವರ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಸ್ಮಾರಕಕ್ಕಾಗಿ ಆಯ್ಕೆ ಮಾಡಿದ ನಿವೇಶವನ್ನು ಅಂತಿಮವಾಗಿ ವಿತರಿಸುವ ಮುನ್ನ ಟ್ರಸ್ಟ್ ಒಂದನ್ನು ಸ್ಥಾಪಿಸಲಾಗುವುದು ಎಂದು ಸಚಿವಾಲಯದ ಉನ್ನತತ ಮೂಲಗಳು ತಿಳಿಸಿವೆ.
ಡಾ.ಮನಮೋಹನ್ಸಿಂಗ್ ಅವರ ಅಂತ್ಯಕ್ರಿಯೆ ಹಾಗೂ ಸ್ಮಾರಕ ಸ್ಥಾಪನೆಗೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವು ವಾಕ್ಸಮನರವನ್ನು ನಡೆಸಿದ್ದವು.