ಮನಮೋಹನ ಸಿಂಗ್ ಸ್ಮಾರಕ ಸ್ಥಳ | ಕುಟುಂಬದ ಅಭಿಪ್ರಾಯಕ್ಕಾಗಿ ಕಾಯುತ್ತಿರುವ ಸರಕಾರ

ಮನಮೋಹನ ಸಿಂಗ್ | PTI
ಹೊಸದಿಲ್ಲಿ : ದಿಲ್ಲಿಯ ರಾಷ್ಟ್ರೀಯ ಸ್ಮತಿ ಸ್ಥಳದಲ್ಲಿ ಅಕ್ಕಪಕ್ಕದಲ್ಲಿರುವ ತಲಾ ಸುಮಾರು 2,000 ಚದರಡಿ ವಿಸ್ತೀರ್ಣದ ಎರಡು ನಿವೇಶನಗಳು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸ್ಮಾರಕ ನಿರ್ಮಾಣಕ್ಕಾಗಿ ಅವರ ಕುಟುಂಬದ ಅನುಮೋದನೆಗಾಗಿ ಕಾಯುತ್ತಿವೆ. ಸಿಂಗ್ ಕುಟುಂಬ ಈ ಪೈಕಿ ಯಾವುದಾದರೂ ಒಂದು ನಿವೇಶನವನ್ನು ಇನ್ನೂ ಆಯ್ಕೆ ಮಾಡಬೇಕಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಿಬ್ಬಂದಿಗಳು ಬುಧವಾರ ಈ ನಿವೇಶನಗಳನ್ನು ಸ್ವಚ್ಛಗೊಳಿಸಿ,ಅಲ್ಲಿ ಬೆಳೆದಿದ್ದ ಹುಲ್ಲನ್ನು ಕತ್ತರಿಸಿದ್ದಾರೆ, ಸ್ಮಾರಕ ನಿರ್ಮಾಣಕ್ಕಾಗಿ ಅಂದಾಜನ್ನು ಸಿದ್ಧಗೊಳಿಸಲಾಗಿದ್ದು,ಸಿಂಗ್ ಕುಟುಂಬದ ಒಪ್ಪಿಗೆಯ ಬಳಿಕ ನಿವೇಶನ ಹಂಚಿಕೆ ಔಪಚಾರಿಕತೆಗಳನ್ನು ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯುಮುನಾ ನದಿ ದಂಡೆಯಲ್ಲಿ ರಿಂಗ್ರೋಡ್ ಮತ್ತು ಸಲೀಮ್ಗಡ ಬೈಪಾಸ್ ನಡುವೆ ಇರುವ ರಾಷ್ಟ್ರೀಯ ಸ್ಮತಿ ಸ್ಥಳ ಸಂಕೀರ್ಣವು 45 ಎಕರೆಗಳಷ್ಟು ವಿಸ್ತಾರದಲ್ಲಿ ಹರಡಿಕೊಂಡಿದೆ.
ಈ ಎರಡೂ ನಿವೇಶನಗಳು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸ್ಮಾರಕಕ್ಕೆ ಹೊಂದಿಕೊಂಡಿದ್ದು,ಮಾಜಿ ರಾಷ್ಟ್ರಪತಿಗಳಾದ ಜೈಲ್ ಸಿಂಗ್,ಎಸ್.ಡಿ.ಶರ್ಮಾ,ಆರ್.ವೆಂಕಟರಾಮನ್ ಮತ್ತು ಕೆ.ಆರ್.ನಾರಾಯಣನ್ ಹಾಗೂ ಮಾಜಿ ಪ್ರಧಾನಿಗಳಾದ ಚಂದ್ರಶೇಖರ ಮತ್ತು ಐ.ಕೆ.ಗುಜ್ರಾಲ್ ಅವರ ಸ್ಮಾರಕಗಳಿಂದ ಸುತ್ತುವರಿದಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರ ನಡೆದಿದ್ದ ಸ್ಮಾರಕ ಉದ್ಯಾನವನ ಸದೈವ ಅಟಲ್ ಕೂಡ ಇದೇ ಸಂಕೀರ್ಣದಲ್ಲಿದೆ.