ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಾಂಗ್ರೆಸ್ ಪಕ್ಷ ಸೇರಲು ಬಯಸಿದ್ದರು: ನವಜೋತ್ ಸಿಂಗ್ ಸಿಧು
ಪಾಟಿಯಾಲಾ: ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹಿಂದೊಮ್ಮೆ ನನ್ನನ್ನು ಸಂಪರ್ಕಿಸಿ, ಕಾಂಗ್ರೆಸ್ ಪಕ್ಷ ಸೇರಲು ಸಿದ್ಧ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡನ ರಾಜಕೀಯ ಭವಿಷ್ಯದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು, ಭಾರತೀಯ ಜನತಾ ಪಕ್ಷ ಅವರನ್ನು ಸಂಪರ್ಕಿಸಿದೆ ಎಂಬ ಊಹಾಪೋಹಗಳ ನಡುವೆಯೇ ಸಿಧು ಈ ಹೇಳಿಕೆ ನೀಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಈ ವದಂತಿಗಳ ಬಗ್ಗೆ ಮತ್ತು ಬಿಜೆಪಿ ಸಂಪರ್ಕಿಸಿದೆಯೇ ಎಂದು ಕೇಳಲಾದ ಪ್ರಶ್ನೆಗೆ, "ನನ್ನನ್ನು ಯಾರು ಸಂಪರ್ಕಿಸಿದ್ದಾರೆ ಎಂದಷ್ಟೇ ನಾನು ಹೇಳಬಲ್ಲೆ; ಭಗವಂತ್ ಮಾನ್ ಸಾಹೇಬ್ ನನ್ನ ಬಳಿಗೆ ಬಂದಿದ್ದರು. ಅವರು ಹೇಳಿದರೆ, ನಾವು ಭೇಟಿಯಾದ ಜಾಗವನ್ನೂ ಹೇಳಬಲ್ಲೆ" ಎಂದು ಉತ್ತರಿಸಿದರು.
"ಪಾಜಿ, ನನ್ನನ್ನು ಕಾಂಗ್ರೆಸ್ಗೆ ಸೇರಿಸಿದರೆ, ನಿಮ್ಮ ಉಪನಾಯಕನಾಗಿ ಇರಲು ಸಿದ್ಧ ಎಂದು ಹೇಳಿದ್ದರು. ಅಂತೆಯೇ ನಾನು ಆಮ್ ಆದ್ಮಿ ಪಾರ್ಟಿ ಸೇರಿದರೆ ಕೂಡಾ ನನ್ನ ಉಪನಾಯಕನಾಗಿ ಇರಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದರು" ಎಂದು ಸಿದ್ದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕತ್ವದ ಮೇಲೆ, ಅದರಲ್ಲೂ ಮುಖ್ಯವಾಗಿ ರಾಹುಲ್ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೇಲಿನ ನಿಷ್ಠೆಯನ್ನು ಪುನರುಚ್ಚರಿಸಿದ ಅವರು, ಈ ಬದ್ಧತೆಯನ್ನು ಮಾನ್ ಅವರಿಗೂ ತಮ್ಮ ಸಂವಾದದ ವೇಳೆ ತಿಳಿಸಿದ್ದಾಗಿ ಸ್ಪಷ್ಟಪಡಿಸಿದರು. ಮಾನ್ ಕಾಂಗ್ರೆಸ್ ಸೇರಲು ಬಯಸಿದಲ್ಲಿ, ದೆಹಲಿ ಮುಖಂಡರ ಜತೆ ಮಾತನಾಡುವುದಾಗಿ ಅವರಿಗೆ ತಿಳಿಸಿದ್ದೆ ಎಂದು ಸಿದ್ದು ವಿವರಿಸಿದ್ದಾರೆ.