ಮರಾಠ ಮೀಸಲಾತಿ ಹೋರಾಟ | 9 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಮನೋಜ್ ಜರಂಗೆ
ಮನೋಜ್ ಜರಂಗೆ | PC : PTI
ಜಲ್ನಾ (ಮಹಾರಾಷ್ಟ್ರ) : ಮರಾಠ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿ, ಮೀಸಲಾತಿ ಒದಗಿಸಬೇಕು ಎಂದು ಕಳೆದ 9 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮರಾಠ ಮೀಸಲಾತಿ ಹೋರಾಟ ನಾಯಕ ಮನೋಜ್ ಜರಂಗೆ, ಬುಧವಾರ ತಮ್ಮ 9 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಜಲ್ನಾ ಜಿಲ್ಲೆಯ ಅಂತರವಾಲಿ ಸಾರಥಿ ಗ್ರಾಮದಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ನಂತರ ತಮ್ಮ ಬೆಂಬಲಿಗರೊಂದಿಗೆ ಮಾತನಾಡಿದ ಮನೋಜ್ ಜರಂಗೆ, “ಮರಾಠ ಸಮುದಾಯದ ಭಾವನಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ. ಯಾರು ಮರಾಠ ಸಮುದಾಯಕ್ಕೆ ನೋವುಂಟು ಮಾಡಿದ್ದಾರೊ ಅಂತಹವರನ್ನು ನಾವು ನೋಡಿಕೊಳ್ಳಲಿದ್ದೇವೆ” ಎಂದು ಹೇಳಿದರು.
ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ಕುಣಬಿ ಸಮುದಾಯವನ್ನು ಮರಾಠ ಸಮುದಾಯದ ರಕ್ತ ಸಂಬಂಧಿ ಎಂದು ಪರಿಗಣಿಸಬೇಕು ಹಾಗೂ ಮರಾಠಿ ಸಮುದಾಯಕ್ಕೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿಸ್ತರಿಸಲು ಕರಡು ಅಧಿಸೂಚನೆಯನ್ನು ಜಾರಿಗೊಳಿಸಬೇಕು ಎಂದು ಮನೋಜ್ ಜರಂಗೆ ಆಗ್ರಹಿಸುತ್ತಾ ಬರುತ್ತಿದ್ದಾರೆ.