ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುವವರಿಂದಲೇ ಮರಾಠರಿಗೆ ಮೀಸಲಾತಿ ನಿರಾಕರಣೆ : ಮನೋಜ್ ಜಾರಂಗೆ ಪಾಟೀಲ್ ವ್ಯಂಗ್ಯ
ಮನೋಜ್ ಜಾರಂಗೆ ಪಾಟೀಲ್ | PC : PTI
ಛತ್ರಪತಿ ಸಂಭಾಜಿ ನಗರ : ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿರುವವರು ಮರಾಠರಿಗೆ ಮೀಸಲಾತಿ ನಿರಾಕರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್, ಮತದಾರರು ಬಿಜೆಪಿ ನೇತೃತ್ವದ ಆಡಳಿತಾರೂಢ ಸರಕಾರಕ್ಕೆ ಸೋಲುಣಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಮಹಾಯುತಿ ಸರಕಾರದ ಅವಧಿಯಲ್ಲಿ ಸಮಾಜದ ಎಲ್ಲ ವರ್ಗವೂ ಸಂಕಷ್ಟ ಎದುರಿಸುತ್ತಿದ್ದು, ಚುನಾವಣೆಯಲ್ಲಿ ಮರಾಠರು ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ ಎಂದು ಜಾರಂಗೆ ವಾಗ್ದಾಳಿ ನಡೆಸಿದ್ದಾರೆ.
PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ 42 ವರ್ಷದ ಮರಾಠ ಮೀಸಲಾತಿ ಹೋರಾಟಗಾರ ಜಾರಂಗೆ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡುತ್ತಿರುವವರು ನೈಜ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಒಂದು ವೇಳೆ ನೀವು ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುವುದಾದರೆ, ಮರಾಠರ ಪರಿಸ್ಥಿತಿಯೇನು? ಮರಾಠರ ಮಕ್ಕಳು ತೊಂದರೆ ಅನುಭವಿಸುತ್ತಿರುವುದು ನಿಮಗೆ ಕಾಣುತ್ತಿಲ್ಲವೆ? ಒಂದು ವೇಳೆ ನೀವು ಹಿಂದೂಗಳು ತೊಂದರೆಯಲ್ಲಿದ್ದಾರೆ ಎನ್ನುವುದಾದರೆ, ಮರಾಠರ ಕಲ್ಯಾಣ ಮಾಡುವುದೂ ಕೂಡಾ ನಿಮ್ಮ ಹೊಣೆಗಾರಿಕೆಯಾಗಿದೆ. ನಾವು ಮೀಸಲಾತಿಗಾಗಿ ಆಗ್ರಹಿಸಿದಾಗ ಅದನ್ನು ವಿರೋಧಿಸುವವರು, ಮುಸ್ಲಿಮರನ್ನುಗುರಿಯಾಗಿಸಿಕೊಂಡಾಗ, ಅವರ ಹಿಂದೆ ದೊಣ್ಣೆಗಳನ್ನು ಹಿಡಿದುಕೊಂಡು ಓಡಲು ಮರಾಠರೇ ಬೇಕಾಗುತ್ತಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
“ವಿಭಜನೆಯಾದರೆ, ಕುಸಿದು ಬೀಳುತ್ತೀರಿ”, “ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ” ಎಂಬ ಬಿಜೆಪಿಯ ಘೋಷಣೆಗಳ ಕುರಿತು ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಮರಾಠರು ದೊಡ್ಡ ಹಿಂದೂ ಜಾತಿಯಲ್ಲವೇ ಎಂದೂ ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
ಶರದ್ ಪವಾರ್, ಉದ್ಧವ್ ಠಾಕ್ರೆ, ಅಜಿತ್ ಪವಾರ್ ಮತ್ತು ಶಿಂದೆ ಕುರಿತ ತಮ್ಮ ದೃಷ್ಟಿಕೋನದ ಕುರಿತು ಕೇಳಿದ ಪ್ರಶ್ನೆಗೆ, ಯಾರೂ ಕೂಡಾ ಮರಾಠ ಮೀಸಲಾತಿಗೆ ನೆರವು ನೀಡಲಿಲ್ಲ ಎಂದು ಜಾರಂಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.