ʼನಾನು ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲಬಾರದಿತ್ತುʼ: ಖೇಲ್ ರತ್ನ ಪ್ರಶಸ್ತಿ ನಾಮನಿರ್ದೇಶಿತರ ಪಟ್ಟಿಯಿಂದ ಹೊರಗುಳಿದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಶೂಟರ್ ಮನು ಭಾಕರ್
Photo | PTI
ಹೊಸದಿಲ್ಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಭಾರತದ ಶೂಟರ್ ಮನು ಭಾಕರ್ ಅವರು ಖೇಲ್ ರತ್ನ ಪ್ರಶಸ್ತಿ ನಿರೀಕ್ಷೆಯಲ್ಲಿದ್ದರೂ ಇದೀಗ 30 ಮಂದಿಯ ಶಾರ್ಟ್ ಲಿಸ್ಟ್ ನಲ್ಲೂ ತನ್ನ ಹೆಸರಿಲ್ಲ ಎಂದು ನಿರಾಶೆಗೊಂಡು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಬಾಕರ್ ಪಾತ್ರರಾಗಿದ್ದಾರೆ. ಖೇಲ್ ರತ್ನ ಪ್ರಶಸ್ತಿಗೆ ಆನ್ ಲೈನ್ ಪೋರ್ಟಲ್ ನಲ್ಲಿ ನಾನು ಅರ್ಜಿಯನ್ನು ಸಲ್ಲಿಸಿದ್ದೇನೆ. ಆದರೆ, 30 ಮಂದಿಯ ಶಾರ್ಟ್ ಲಿಸ್ಟ್ ನಲ್ಲೂ ನನ್ನ ಹೆಸರು ಇರಲಿಲ್ಲ ಎಂದು ಹೇಳಿದ್ದು, ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ತನ್ನ ಹೆಸರನ್ನು ಪರಿಗಣಿಸದಿರುವ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಮನು ಬಾಕರ್ ತಂದೆ ಕೂಡ ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ಶೂಟಿಂಗ್ ನಂತಹ ಕ್ರೀಡೆಗೆ ಆಕೆಯನ್ನು ಸೇರಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ, ಅವಳನ್ನು ನಾನು ಕ್ರಿಕೆಟಿಗಳನ್ನಾಗಿ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಈ ಕುರಿತು Times of India ಜೊತೆ ಮಾತನಾಡಿದ ಮನು ಭಾಕರ್ ತಂದೆ, ಕ್ರೀಡಾ ಸಚಿವಾಲಯ ಮತ್ತು ಖೇಲ್ ರತ್ನ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ. ʼಆಕೆಯನ್ನು ಶೂಟಿಂಗ್ ಕ್ರೀಡೆಗೆ ಸೇರಿಸಿದ್ದಕ್ಕೆ ನನಗೆ ವಿಷಾದವಿದೆ. ಬದಲಿಗೆ ಅವಳನ್ನು ಕ್ರಿಕೆಟಿಗಳನ್ನಾಗಿ ಮಾಡಬೇಕಿತ್ತು. ಆಗ ಎಲ್ಲ ಪ್ರಶಸ್ತಿ, ಪುರಸ್ಕಾರಗಳು ಆಕೆಗೆ ಬರುತ್ತಿದ್ದವು. ಅವರು ಒಂದೇ ಆವೃತ್ತಿಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದುಕೊಂಡಿದ್ದಾರೆ, ಈ ಮೊದಲು ಯಾರೂ ಆ ಸಾಧನೆ ಮಾಡಿಲ್ಲ, ನನ್ನ ಮಗು ದೇಶಕ್ಕಾಗಿ ಇನ್ನೇನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ? ಆಕೆಯ ಪ್ರಯತ್ನವನ್ನು ಸರ್ಕಾರ ಗುರುತಿಸಬೇಕು. ನಾನು ಮನು ಜೊತೆ ಮಾತನಾಡಿದೆ ಮತ್ತು ಅವಳು ಈ ಬೆಳವಣಿಗೆಯಿಂದ ಮನನೊಂದಿದ್ದಾಳೆ. 'ನಾನು ಒಲಿಂಪಿಕ್ಸ್ಗೆ ಹೋಗಿ ದೇಶಕ್ಕಾಗಿ ಪದಕಗಳನ್ನು ಗೆಲ್ಲಬಾರದಿತ್ತು, ನಾನು ಕ್ರೀಡಾಪಟು ಆಗಬಾರದಿತ್ತು' ಎಂದು ಅವಳು ನನಗೆ ಹೇಳಿದ್ದಾಳೆʼ ಎಂದು ಮನು ಅವರ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.