ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ : ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರವನ್ನು 30 ಲ.ರೂ.ಗಳಿಗೆ ಹೆಚ್ಚಿಸಿದ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿಯ ನಿರ್ಮೂಲನವನ್ನು ಖಚಿತ ಪಡಿಸುವಂತೆ ಶುಕ್ರವಾರ ಕೇಂದ್ರ,ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್,ಮಲಗುಂಡಿಗಳು ಮತ್ತು ಒಳಚರಂಡಿಗಳ ಸ್ವಚ್ಛತೆ ವೇಳೆ ಸಾವನ್ನಪ್ಪುವ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು 10 ಲ.ರೂ.ಗಳಿಂದ 30 ಲ.ರೂ.ಗಳಿಗೆ ಹೆಚ್ಚಿಸಿದೆ.
ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ,2013ರಡಿ ಮಲಗುಂಡಿಗಳನ್ನು ಕೈಗಳಿಂದ ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆಯಾದರೂ, ದೇಶದ ಹಲವಾರು ಭಾಗಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ.
ಶುಕ್ರವಾರ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪದ್ಧತಿ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮೂವರು ನ್ಯಾಯಾಧೀಶರ ಪೀಠವು ಈ ನಿರ್ದೇಶನಗಳನ್ನು ಹೊರಡಿಸಿತು. ಮಲಗುಂಡಿಗಳು ಮತ್ತು ಒಳಚರಂಡಿಗಳ ಸ್ವಚ್ಛತೆ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯಕ್ಕಾಗಿ ಕನಿಷ್ಠ 20 ಲ.ರೂ.ಗಳನ್ನು ಮತ್ತು ಕಾರ್ಮಿಕರಿಗೆ ಇತರ ಅಂಗವೈಕಲ್ಯಗಳುಂಟಾದರೆ ಕನಿಷ್ಠ 20 ಲ.ರೂ.ಗಳ ಪರಿಹಾರವನ್ನು ಪಾವತಿಸಬೇಕು ಎಂದು ಅದು ಹೇಳಿತು.
1993ರ ನಂತರ ಮಲಗುಂಡಿಗಳು ಅಥವಾ ಒಳಚರಂಡಿಗಳನ್ನು ಸ್ವಚ್ಛ ಮಾಡುವಾಗ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ 10 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ 2014ರಲ್ಲಿ ಆದೇಶಿಸಿತ್ತು.
ಸಮಾನತೆಯ ಹಕ್ಕನ್ನು ಜಾರಿಗೊಳಿಸುವುದಕ್ಕೆ ಹಾಗೂ ಅಸ್ಪಶ್ಯತೆ ಮತ್ತು ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನಕ್ಕೆ ಸರಕಾರಗಳು ಕರ್ತವ್ಯಬದ್ಧವಾಗಿವೆ ಎಂದು ಶುಕ್ರವಾರ ಹೇಳಿದ ಸುಪ್ರೀಂ ಕೋರ್ಟ್, ‘ಅಮಾನವೀಯ ಪರಿಸ್ಥಿತಿಗಳಲ್ಲಿ ಇಂತಹ ಅನಿಷ್ಟ ಪದ್ಧತಿಯಲ್ಲಿ ಸಿಕ್ಕಿಕೊಂಡಿರುವ ಗೋಚರಿಸದ ಮತ್ತು ಧ್ವನಿಯನ್ನು ಉಡುಗಿಸಲ್ಪಟ್ಟಿರುವ ಜನಸಂಖ್ಯೆಯ ಈ ದೊಡ್ಡ ಭಾಗಕ್ಕೆ ನಮ್ಮಲ್ಲಿ ಪ್ರತಿಯೊಬ್ಬರೂ ಋಣಿಗಳಾಗಿದ್ದೇವೆ ’ಎಂದು ಹೇಳಿತು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2024, ಫೆ.1ಕ್ಕೆ ನಿಗದಿಗೊಳಿಸಿದೆ.
ಸಾವುಗಳ ಕುರಿತು ಕೇಂದ್ರದ ಅಂಕಿಅಂಶಗಳು
ಮಾರ್ಚ್ನಲ್ಲಿ ಕೇಂದ್ರ ಸರಕಾರವು 1993ರಿಂದ ದೇಶಾದ್ಯಂತ ಮಲಗುಂಡಿಗಳು ಮತ್ತು ಒಳಚರಂಡಿಗಳನ್ನು ಸ್ವಚ್ಛ ಮಾಡುವಾಗ 1035 ಜನರು ಮೃತಪಟ್ಟಿದ್ದಾರೆ. ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸದ್ದಕ್ಕಾಗಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕಾಯ್ದೆಯಡಿ 616 ಗುತ್ತಿಗೆದಾರರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ, ಒಂದು ಪ್ರಕರಣದಲ್ಲಿ ಮಾತ್ರ ದೋಷನಿರ್ಣಯಗೊಂಡಿದೆ ಎಂದು ತಿಳಿಸಿತ್ತು.
ಸ್ವಯಂ ಉದ್ಯೋಗ ಯೋಜನೆಗಾಗಿ ಕುಸಿಯುತ್ತಲೇ ಇರುವ ಅನುದಾನ
ಕೇಂದ್ರವು 2019-20ರ ಬಜೆಟ್ನಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳಿಗಾಗಿ ಸ್ವಯಂ ಉದ್ಯೋಗ ಯೋಜನೆಗಾಗಿ 110 ಕೋ.ರೂ.ಗಳನ್ನು ಹಂಚಿಕೆ ಮಾಡಿತ್ತು, ಆದರೆ ಪರಿಷ್ಕರಣೆಯ ಬಳಿಕ ಈ ಮೊತ್ತವು 99.93 ಕೋ.ರೂ.ಗೆ ಇಳಿದಿತ್ತು. 2020-2021 ಮತ್ತು 2021-22ರ ಬಜೆಟ್ಗಳಲ್ಲಿ ಅನುಕ್ರಮವಾಗಿ 110 ಕೋ.ರೂ.ಮತ್ತು 100 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತಾದರೂ ಪರಿಷ್ಕರಣೆಯ ಬಳಿಕ 30 ಕೋ.ರೂ.ಮತ್ತು 43.31 ಕೋ.ರೂ.ಗೆ ಇಳಿದಿತ್ತು.