ಮರಾಠಾ ಮೀಸಲಾತಿ: ಮತ್ತೋರ್ವ ಯುವಕ ಆತ್ಮಹತ್ಯೆ
ಮುಂಬೈ: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ 25 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಾಠಾ ಮೀಸಲಾತಿ ನೀಡಲು ವಿಳಂಬಿಸಿರುವುದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆತ ಸುಸೈಡ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ.
ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ-ಪಾಟೀಲ್ ಆಗಸ್ಟ್ 29ರಿಂದ ಉಪವಾಸ ಮುಷ್ಕರ ಆರಂಭಿಸಿದ ಬಳಿಕ ಮರಾಠಾ ಮೀಸಲಾತಿಯನ್ನು ಬೆಂಬಲಿಸಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೃಷ್ಣ ಕಲ್ಯಾಣ್‌ಕರ್ ಎಂದು ಗುರುತಿಸಲಾಗಿದೆ. ಈತ ಆಖಾಡ ಬಾಲಾಪುರ ಗ್ರಾಮದ ತನ್ನ ಹೊಲದಲ್ಲಿ ಇರುವ ಮರಕ್ಕೆ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
‘‘ಆತನ ಕಿಸೆಯಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ’’ ಎಂದು ಹೆಸರು ಹೇಳಲಿಚ್ಛಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದುವರೆಗೆ ಅನುಷ್ಠಾನಗೊಳ್ಳದ ಮರಾಠಿ ಮೀಸಲಾತಿ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಆತ ಸುಸೈಡ್ ನೋಟ್‌ನಲ್ಲಿ ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಂಣ್‌ಕರ್ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪ್ರತಿಭಟನಕಾರರು ಮರಾಠಾ ಮೀಸಲಾತಿಯನ್ನು ವಿರೋಧಿಸುತ್ತಿರುವ ಮುಂಬೈ ಮೂಲದ ನ್ಯಾಯವಾದಿ ಗುಣರತ್ನ ಸದಾವರ್ತೆ ಅವರ ವಾಹನಗಳಿಗೆ ಹಾನಿ ಉಂಟು ಮಾಡಿದ್ದಾರೆ.
ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಮರಾಠಾ ಮೀಸಲಾತಿ ಕಾರ್ಯಕರ್ತರು ಬುಧವಾರ ಉಪವಾಸ ಮುಷ್ಕರವನ್ನು ಮರು ಆರಂಭಿಸಿದ್ದಾರೆ.