ಮರಾಠರು ಶಿಂದೆ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ: ಶಿವಸೇನೆ ನಾಯಕಿ ಶೀತಲ್
ಮಹಾರಾಷ್ಟ್ರ ಸಿಎಂ ಆಯ್ಕೆ ಇನ್ನೂ ನಿಗೂಢ
ಏಕನಾಥ್ ಶಿಂದೆ | PC : PTI
ಮುಂಬೈ: ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಬೇಕು ಎಂಬ ಮರಾಠರ ಬೇಡಿಕೆ ಬಲಗೊಳ್ಳುತ್ತಿದೆ ಎಂದು ಮಂಗಳವಾರ ಶಿವಸೇನೆ (ಶಿಂದೆ ಬಣ) ವಕ್ತಾರೆ ಶೀತಲ್ ಮಹಾತ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರ್ರಿಯನ್ನಾಗಿ ಮಹಾಯುತಿ ಮೈತ್ರಿಕೂಟ ಯಾರನ್ನು ಆಯ್ಕೆ ಮಾಡಲಿದೆ ಎಂಬ ಸಂಗತಿ ಇನ್ನೂ ನಿಗೂಢವಾಗಿಯೇ ಮುಂದುವರಿದಿರುವ ಹೊತ್ತಿನಲ್ಲಿ, ಏಕನಾಥ್ ಶಿಂದೆ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಮರಾಠ ಸಮುದಾಯ ಬಯಸುತ್ತಿದೆ ಎಂದು ಶಿವಸೇನೆ ನಾಯಕರು ಪ್ರತಿಪಾದಿಸತೊಡಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶೀತಲ್ ಮಹಾತ್ರೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ಅಪೇಕ್ಷಣೀಯವಾಗಿದೆ ಎಂದು ಹೇಳಿದ್ದಾರೆ.
“ಶಿಂದೆ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರವರ್ಗದಲ್ಲಿ ಮರಾಠ ಸಮುದಾಯಕ್ಕೆ ಯಶಸ್ವಿಯಾಗಿ ಮೀಸಲಾತಿ ಕಲ್ಪಿಸಿದ್ದಾರೆ. ಇದರೊಂದಿಗೆ, ಅನ್ನಾಸಾಹೇಬ್ ಪಾಟೀಲ್ ಮತ್ತು ಸಾರಥಿ ನಿಗಮಗಳ ಮೂಲಕ ಮರಾಠ ಸಮುದಾಯಕ್ಕೆ ನೆರವು ಒದಗಿಸಿದ್ದಾರೆ. ಹೀಗಾಗಿ ಮರಾಠ ಸಮುದಾಯವು ಮಹಾಯುತಿ ಮೈತ್ರಿಕೂಟದ ಬೆನ್ನಿಗೆ ನಿಂತಿತು” ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯವರಾದ ಮುಖ್ಯಮಂತ್ರಿ ಏಕನಾಥ್ ಶಿಂದೆ, ಪ್ರಬಲ ಮರಾಠ ಸಮುದಾಯಕ್ಕೆ ಸೇರಿದವರು. ಆದರೆ, ಚುನಾವಣೆಯಲ್ಲಿ ಬಿಜೆಪಿ ಅಮೋಘ ಪ್ರದರ್ಶನ ನೀಡಿರುವುದರಿಂದ ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ನಾಗಪುರದ ಬ್ರಾಹ್ಮಣ ಸಮುದಾಯವರಾಗಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅದ್ಭುತ ಗೆಲುವು ಸಾಧಿಸಿದ್ದು, 288 ಸ್ಥಾನಗಳ ಪೈಕಿ 230 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಹೀಗಿದ್ದೂ, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಇದುವರೆಗೆ ಸಹಮತ ಮೂಡಿಲ್ಲ.